ಶ್ರೀಮಂತ ಸಂಸದರು ವೇತನ ಬಿಡಿ: ವರುಣ್ ಸಲಹೆ

ಹೊಸದಿಲ್ಲಿ, ಜ.29: ಹದಿನಾರನೇ ಲೋಕಸಭೆಯ ಉಳಿದ ಅವಧಿಗೆ ಎಲ್ಲ ಶ್ರೀಮಂತ ಸಂಸದರು ವೇತನ ಬಿಡುವ ಹೊಸ ಆಂದೋಲನಕ್ಕೆ ನಾಂದಿ ಹಾಡುವಂತೆ ಬಿಜೆಪಿ ಸಂಸದ ವರುಣ್ ಗಾಂಧಿ ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಆಗ್ರಹಿಸಿದ್ದಾರೆ. 16ನೇ ಲೋಕಸಭೆಯ ಅವಧಿ ಮುಂದಿನ ವರ್ಷದ ಮೇ ತಿಂಗಳು ಮುಕ್ತಾಯವಾಗುತ್ತದೆ.
ಈ ಸ್ವಯಂಪ್ರೇರಿತ ಕ್ರಮ ದೇಶದಲ್ಲಿ ಚುನಾಯಿತ ಪ್ರತಿನಿಧಿಗಳ ಬಗೆಗೆ ಧನಾತ್ಮಕ ಸಂದೇಶ ರವಾನಿಸುತ್ತದೆ ಎಂದು ಅವರು ಸ್ಪೀಕರ್ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಈ ವಿಚಾರದಲ್ಲಿ ಮಹಾಜನ್ ನೈತಿಕ ಮುಖಂಡತ್ವ ವಹಿಸಬೇಕು ಎಂದು ಕೋರಿದ್ದಾರೆ.
ವೇತನ ತ್ಯಜಿಸುವಂತೆ ಮನವಿ ಮಾಡುವುದು ಅತಿ ಎನಿಸಿದರೆ, ನಮ್ಮ ಮನಸ್ಸಿಗೆ ಬಂದಂತೆ ವೇತನ ಹೆಚ್ಚಿಸುವುದಕ್ಕೆ ಪರ್ಯಾಯ ಕಾರ್ಯತಂತ್ರ ರೂಪಿಸುವ ವ್ಯವಸ್ಥೆ ಆರಂಭಿಸಬಹುದು ಎಂದು ಸಲಹೆ ಮಾಡಿದ್ದಾರೆ. ಎಡಿಆರ್ ಸಮೀಕ್ಷೆಯಂತೆ 132 ಸಂಸದರ ಘೋಷಿತ ಆಸ್ತಿ 10 ಕೋಟಿ ರೂ.ಗಿಂತ ಅಧಿಕ ಇದೆ. 16ನೇ ಲೋಕಸಭೆ ಸದಸ್ಯರ ಸರಾಸರಿ ಆಸ್ತಿ ಮೌಲ್ಯ 14.61 ಕೋಟಿ ರೂಪಾಯಿ ಇದೆ ಎಂದು ವರುಣ್ ಉಲ್ಲೇಖಿಸಿದ್ದಾರೆ.
Next Story