ಬಿಜೆಪಿಗೆ ಮತ ನೀಡುವುದಿಲ್ಲ: ಮಧ್ಯಪ್ರದೇಶದ ವಿದ್ಯಾರ್ಥಿಗಳಿಂದ ಪ್ರತಿಜ್ಞೆ

ಮಧ್ಯಪ್ರದೇಶ, ಜ.29: ಇಲ್ಲಿನ ಇಟ್ರಾಸಿಯ ಶಿಕ್ಷಣ ಸಂಸ್ಥೆಯೊಂದರ ಶಿಕ್ಷಕರು ‘ಬಿಜೆಪಿಗೆ ಮತ ನೀಡುವುದಿಲ್ಲ’ ಎಂದು ವಿದ್ಯಾರ್ಥಿಗಳೊಂದಿಗೆ ಪ್ರತಿಜ್ಞೆ ಮಾಡುವಂತೆ ಹೇಳಿದ ಘಟನೆಯೊಂದು ನಡೆದಿದೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕೆಂದು ಇಟ್ರಾಸಿಯ ವಿಜಯಲಕ್ಷ್ಮೀ ಕೈಗಾರಿಕಾ ತರಬೇತಿ ಸಂಸ್ಥೆಯ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೇಳಿದ್ದಾರೆ. ಆನ್ ಲೈನ್ ಪರೀಕ್ಷೆಯನ್ನು ಆಡಳಿತ ಸರಕಾರವು ನಿಲ್ಲಿಸುವವರೆಗೆ ಭವಿಷ್ಯದಲ್ಲೂ ಈ ಪ್ರತಿಜ್ಞೆಯನ್ನು ಕಾಪಾಡಿಕೊಳ್ಳಬೇಕೆಂದೂ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ವಿನಂತಿಸಿದ್ದಾರೆ.
ಈ ಪ್ರತಿಜ್ಞೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿದ್ಯಾರ್ಥಿಗಳಿಗೆ ಒಬ್ಬರು ಪ್ರತಿಜ್ಞೆಯನ್ನು ಬೋಧಿಸಿದ್ದಾರೆ. ಆನ್ ಲೈನ್ ಪರೀಕ್ಷೆ ನಿಲ್ಲಿಸುವವರೆಗೆ ಬಿಜೆಪಿಗೆ ಮತ ಹಾಕುವುದಿಲ್ಲ ಹಾಗು ಬಿಜೆಪಿಯ ಯಾವ ಸದಸ್ಯನನ್ನೂ ಬೆಂಬಲಿಸುವುದಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳಲಾಗಿದೆ.
“24 ಗಂಟೆಗಳೊಳಗೆ ಇತರ ಮೂವರು ಇದೇ ರೀತಿಯ ಪ್ರತಿಜ್ಞೆ ಕೈಗೊಳ್ಳುವಂತೆ ಮಾಡಲು ನಾನು ಪ್ರಯತ್ನಿಸುತ್ತೇನೆ. ಬಿಜೆಪಿಯ ಭ್ರಷ್ಟಾಚಾರ ಹಾಗು ಅನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ” ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಕೈಗೊಂಡಿದ್ದಾರೆ.