ತ್ರಿವಳಿ ತಲಾಖ್ ಮಸೂದೆ ಅಂಗೀಕಾರ: ಸಹಕರಿಸಲು ವಿಪಕ್ಷಗಳಿಗೆ ಪ್ರಧಾನಿ ಮನವಿ

ಹೊಸದಿಲ್ಲಿ,ಜ.29 : ಸೋಮವಾರ ಆರಂಭಗೊಂಡಿರುವ ಬಜೆಟ್ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಮಸೂದೆ ಅನುಮೋದನೆಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮಸೂದೆ ಅನುಮೋದನೆಗೆ ಎಲ್ಲಾ ಸಂಸದರ ಸಹಕಾರ ಕೋರಿದರಲ್ಲದೆ ಇದನ್ನು “ಮುಸ್ಲಿಂ ಮಹಿಳೆಯರಿಗೆ ಹೊಸ ವರ್ಷದ ಉಡುಗೊರೆ'' ಎಂದು ಬಣ್ಣಿಸಿದರು.
ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವೆಂದು ಪರಿಗಣಿಸುವ ತ್ರಿವಳಿ ತಲಾಖ್ ಮಸೂದೆ ಅಥವಾ ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017 ಇದನ್ನು ಕಳೆದ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆ ಅಂಗೀಕರಿಸಿದ್ದರೂ ಅದನ್ನು ವಿಸ್ತೃತ ಪರಿಶೀಲನೆಗಾಗಿ ಸಮಿತಿಯೊಂದರ ಮುಂದೆ ತರಬೇಕೆಂದು ರಾಜ್ಯಸಭೆಯಲ್ಲಿ ವಿಪಕ್ಷಗಳು ಆಗ್ರಹಿಸಿದ್ದವು. ಈ ಮಸೂದೆಯಂತೆ ತ್ರಿವಳಿ ತಲಾಖ್ ಪದ್ಧತಿ ಅನುಸರಿಸಿದ ವ್ಯಕ್ತಿಗೆ ಮೂರು ವರ್ಷಗಳ ತನಕ ಜೈಲು ಶಿಕ್ಷೆಯಾಗಬಹುದು.
ಇಂದಿನ ಬಜೆಟ್ ಅಧಿವೇಶನವು ರಾಷ್ಟ್ರಪತಿಗಳ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ಮಾಡಿದ ಭಾಷಣದೊಂದಿಗೆ ಆರಂಭಗೊಂಡಿದೆ. ಈ ದಿನ ಇಕನಾಮಿಕ್ ಸರ್ವೇ ಆಫ್ ಇಂಡಿಯಾ ವರದಿಯನ್ನು ಸರಕಾರ ಸಂಸತ್ತಿನ ಮುಂದಿಡಲಿದೆ.
ತ್ರಿವಳಿ ತಲಾಖ್ ಮಸೂದೆ ಅನುಮೋದನೆಗೆ ಸಹಕರಿಸುವಂತೆ ಪ್ರಧಾನಿ ನೀಡಿದ್ದ ಕರೆಯ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ "ಒಂದು ದಿನ ರಾಷ್ಟ್ರಪತಿ ಸದನ ಉದ್ದೇಶಿಸಿ ಮಾತನಾಡಿದರೆ ಇನ್ನೊಂದು ದಿನ ಬಜೆಟ್ ಮಂಡನೆಯಾಗಲಿದೆ, ಉಳಿದೆರಡು ದಿನಗಳಲ್ಲಿ ಅನೌಪಚಾರಿಕ ಮಸೂದೆಗಳ ಬಗೆಗೆ ಚರ್ಚೆ ನಡೆಯಲಿದೆ, ಎಲ್ಲಾ ವಿಷಯಗಳನ್ನು ನಾಲ್ಕು ದಿನಗಳಲ್ಲಿ ಹೇಗೆ ಚರ್ಚೆ ನಡೆಸಬಹುದು ? ಇದು ಕೇವಲ ಕಣ್ಣಿಗೆ ಮಣ್ಣೆರಚುವ ತಂತ್ರ,'' ಎಂದಿದ್ದಾರೆ.
ಸರಕಾರ ತ್ರಿವಳಿ ತಲಾಖ್ ಅನುಮೋದನೆಗೆ ಕಾತುರವಾಗಿದ್ದರೆ ವಿಪಕ್ಷಗಳು ಮತೀಯ ಹಿಂಸಾಚಾರ, ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆಗಳು ಇವೇ ಮುಂತಾದ ವಿಚಾರಗಳ ಬಗ್ಗೆ ಚರ್ಚೆಗೆ ಹೆಚ್ಚಿನ ಗಮನ ನೀಡುವ ಸಾಧ್ಯತೆಯಿದೆ.