ಕಾಸ್ಗಂಜ್ ಗಲಭೆ 'ನಾಚಿಕೆಗೇಡು', ರಾಜ್ಯಕ್ಕೆ ಕಳಂಕ
ಆದಿತ್ಯನಾಥ್ ಸರಕಾರದ ವಿರುದ್ಧ ಉ.ಪ್ರದೇಶ ರಾಜ್ಯಪಾಲರ ಆಕ್ರೋಶ

ಲಕ್ನೋ, ಜ.29: ಕಾಸ್ ಗಂಜ್ ಮತೀಯ ಹಿಂಸಾಚಾರ ಉತ್ತರ ಪ್ರದೇಶಕ್ಕೊಂದು ಕಳಂಕವಾಗಿದೆ ಎಂದು ಹೇಳಿರುವ ರಾಜ್ಯಪಾಲ ರಾಮ್ ನಾಯ್ಕೊ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿದ್ದಾರೆ. ಕಳೆದ ಒಂಬತ್ತು-ಹತ್ತು ತಿಂಗಳಲ್ಲಿ ನಡೆದ ಇಂತಹ ಮೊದಲ ಘಟನೆ ಇದಾಗಿದೆ ಎಂದು ಹೇಳಿರುವ ರಾಜ್ಯಪಾಲರು ಅದನ್ನು ‘ನಾಚಿಕೆಗೇಡು’ ಎಂದು ಬಣ್ಣಿಸಿದ್ದಾರೆ.
ಸದ್ಯ ಕಾಸ್ ಗಂಜ್ ನಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದ್ದರೂ ನಿಯಂತ್ರಣದಲ್ಲಿದೆ. ಗಣರಾಜ್ಯೋತ್ಸವ ದಿನದಂದು ಮೋಟಾರ್ ಸೈಕಲ್ ರ್ಯಾಲಿಯೊಂದರತ್ತ ಕಲ್ಲು ತೂರಾಟ ನಡೆದ ನಂತರ ಉಂಟಾದ ಮತೀಯ ಹಿಂಸಾಚಾರದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದರೆ ಕನಿಷ್ಠ ಮೂರು ಮಳಿಗೆಗಳು, ಎರಡು ಬಸ್ಸುಗಳು ಹಾಗೂ ಒಂದು ಕಾರು ದುಷ್ಕಮಿಗಳ ಅಟ್ಟಹಾಸಕ್ಕೆ ಧ್ವಂಸಗೊಂಡಿದ್ದವು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸುವಂತೆ ಇತ್ತೀಚೆಗಷ್ಟೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಸಲಹೆ ನೀಡಿದ್ದರು. ‘‘ರಾಜ್ಯದಲ್ಲಿ ಶಸ್ತ್ರಾಸ್ತ್ರ ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹೆಚ್ಚು ಅಪರಾಧಗಳು ನಡೆಯುತ್ತಿವೆ. ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸುವಂತೆ ಮಾಡಬೇಕು’’ ಎಂದು ಅವರು ಉತ್ತರ ಪ್ರದೇಶ ದಿವಸ್ ಸಮಾರಂಭದಲ್ಲಿ ಹೇಳಿದ್ದರು.
ಹಿಂಸಾಚಾರದ ಸಂಬಂಧ ಇಲ್ಲಿಯವರೆಗೆ 112 ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ಸುರಕ್ಷತೆಗಾಗಿ ಡ್ರೋನ್ ಕ್ಯಾಮರಾಗಳನ್ನೂ ಉಪಯೋಗಿಸಲಾಗುತ್ತಿದೆ. ಹಲವಾರು ಮನೆಗಳಲ್ಲಿ ಶೋಧ ಕಾರ್ಯವೂ ನಡೆದಿದ್ದು, ಈ ಸಂದರ್ಭ ಸ್ಫೋಟಕಗಳು ಪತ್ತೆಯಾಗಿವೆ. ತಪ್ಪತಸ್ಥರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯನ್ವಯ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಪೊಲೀಸ್ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.