"ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ನುಗ್ಗಿ ಪಾಕ್ ವಿರೋಧಿ ಘೋಷಣೆ ಕೂಗುವುದೇಕೆ?"
ಹುಸಿ ರಾಷ್ಟ್ರೀಯವಾದಿಗಳಿಗೆ ಚಾಟಿ ಬೀಸಿದ ಬರೇಲಿ ಜಿಲ್ಲಾಧಿಕಾರಿ

ಬರೇಲಿ, ಜ.30: ಬಲವಂತವಾಗಿ ಮುಸ್ಲಿಮರ ಬಾಹುಳ್ಯವಿರುವ ಪ್ರದೇಶಗಳಿಗೆ ನುಗ್ಗುವ ಹಾಗೂ ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸುವ ಪ್ರವೃತ್ತಿ ಏಕೆ ಹೆಚ್ಚುತ್ತಿದೆ ಎಂದು ಬರೇಲಿ ಜಿಲ್ಲಾಧಿಕಾರಿ ರಾಘವೇಂದ್ರ ವಿಕ್ರಮ್ ಸಿಂಗ್ ಫೇಸ್ಬುಕ್ ಪೋಸ್ಟ್ನಲ್ಲಿ ಪ್ರಶ್ನಿಸುವ ಮೂಲಕ ಹುಸಿ ರಾಷ್ಟ್ರೀಯವಾದಿಗಳ ವಿರುದ್ಧ ಚಾಟಿ ಬೀಸಿದ್ದಾರೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಕಾಸ್ಗಂಜ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಪೋಸ್ಟ್ ವಿಶೇಷ ಗಮನ ಸೆಳೆದಿದೆ. "ರಾಷ್ಟ್ರೀಯತೆಯ ಹೆಸರಿನಲ್ಲಿ ನಡೆಯುತ್ತಿರುವ ಇಂಥ ಕೃತ್ಯಗಳ ಬಗ್ಗೆ ಅಪಾರ ನೋವು ಹಾಗೂ ಸಿಟ್ಟಿದೆ" ಎಂದು ಅವರು ಹೇಳಿದ್ದಾರೆ. ಕಾಸ್ಗಂಜ್ ಗಲಭೆಯಲ್ಲಿ ಒಬ್ಬ ಮೃತಪಟ್ಟು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಹಲವು ಮನೆ ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವು ವಾಹನಗಳು ಕೂಡಾ ಬೆಂಕಿಗೆ ಆಹುತಿಯಾಗಿವೆ.
"ಇತ್ತೀಚೆಗೆ ವಿಚಿತ್ರ ಮನೋಪ್ರವೃತ್ತಿ ಬೆಳೆಯುತ್ತಿದೆ. ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮೆರವಣಿಗೆಗಳನ್ನು ಬಲವಂತವಾಗಿ ಒಯ್ಯುವುದು ಹಾಗೂ ಪಾಕಿಸ್ತಾನಿ ವಿರೋಧಿ ಘೋಷಣೆಗಳನ್ನು ಕೂಗುವುದು. ಏಕೆ? ಇವರು ಪಾಕಿಸ್ತಾನಿಗಳೇ? ಇಂಥದ್ದೇ ಘಟನೆ ಬರೇಲಿಯ ಖೈಲಂನಲ್ಲಿ ನಡೆದಿದೆ. ಬಳಿಕ ಕಲ್ಲು ತೂರಾಟ ನಡೆದಿದೆ. ಎಫ್ಐಆರ್ ದಾಖಲಾಗಿದೆ" ಎಂದು ಅವರು ಒಂದು ಫೇಸ್ಬುಕ್ ಪೋಸ್ಟ್ನಲ್ಲಿ ಆಕ್ಷೇಪಿಸಿದ್ದಾರೆ.
ಕಳೆದ ವರ್ಷದ ಜುಲೈನಲ್ಲಿ ಕನ್ವರ್ ಯಾತ್ರೆ ವೇಳೆ, ಮುಸ್ಲಿಂ ಬಾಹುಳ್ಯದ ಖೈಲಂ ಮೂಲಕ ಮೆರವಣಿಗೆ ಒಯ್ದ ಕಾರಣದಿಂದ 15 ಮಂದಿ ಐಟಿಬಿಪಿ ಜವಾನರು ಮತ್ತು ಹಲವಾರು ಮಂದಿ ಕನ್ವಾರಿಯಾಗಳು ಗಾಯಗೊಂಡಿದ್ದರು. ಗುಂಪು ಘರ್ಷಣೆ ನಡೆದು, 250 ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಇಂಥ ರಾಷ್ಟ್ರೀಯವಾದಿಗಳು ಇನ್ನೂ ದೊಡ್ಡ ಶತ್ರು ದೇಶವಾದ ಚೀನಾ ವಿರುದ್ಧ ಏಕೆ ಘೋಷಣೆ ಕೂಗುವುದಿಲ್ಲ ಎಂದು ಸಿಂಗ್ ಪ್ರಶ್ನಿಸಿದ್ದಾರೆ. ತ್ರಿವರ್ಣಧ್ವಜ ಬೀಸುತ್ತಾ ಚೀನಾ ವಿರುದ್ಧ ಏಕೆ ಘೋಷಣೆ ಕೂಗುವುದಿಲ್ಲ ಎಂದು ಮತ್ತೊಂದು ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ. ದೇಶದಲ್ಲಿ ಕೋಮು ಸೌಹಾರ್ದ ಕಾಪಾಡುವ ಅನಿವಾರ್ಯತೆಯನ್ನು ಅವರು ಪ್ರತಿಪಾದಿಸಿದ್ದಾರೆ.