ಭಾರತದಲ್ಲಿ 21 ದಶಲಕ್ಷ ’ಅನಪೇಕ್ಷಿತ’ ಹೆಣ್ಣುಮಕ್ಕಳು!
ತಿಳಿಗುಲಾಬಿ ಬಣ್ಣದ ಆರ್ಥಿಕ ಸಮೀಕ್ಷಾ ವರದಿ

ಹೊಸದಿಲ್ಲಿ, ಜ.30: ಭಾರತದಲ್ಲಿ ಗಂಡುಮಕ್ಕಳನ್ನು ಪಡೆಯಲು ಆದ್ಯತೆ ನೀಡುವ ಸಾಮಾಜಿಕ ಮನೋಭಾವ ಬದಲಾಗಬೇಕು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ 'ತಿಳಿಗುಲಾಬಿ ಬಣ್ಣದ ಆರ್ಥಿಕ ಸಮೀಕ್ಷೆ ವರದಿ'ಯಲ್ಲಿ ಪ್ರತಿಪಾದಿಸಲಾಗಿದೆ. ಅಸಮಾನ ಲಿಂಗಾನುಪಾತದಿಂದಾಗಿ ಸುಮಾರು 63 ದಶಲಕ್ಷ ಮಹಿಳೆಯರು ಕಡಿಮೆ ಇದ್ದಾರೆ ಎಂಬ ಅಂಶವನ್ನು ಕೂಡಾ ಸಮೀಕ್ಷೆ ಬಹಿರಂಗಪಡಿಸಿದೆ.
ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಈ ಬಾರಿಯ ಸಮೀಕ್ಷಾ ವರದಿಯ ರಕ್ಷಾಪುಟದ ಬಣ್ಣ ಆಯ್ಕೆ ಮಾಡಿದ್ದು, ಮಹಿಳೆಯರ ವಿರುದ್ಧದ ಹಿಂಸೆಯನ್ನು ತಡೆಯುವ ನಿಟ್ಟಿನಲ್ಲಿ ಬಲಗೊಳ್ಳುತ್ತಿರುವ ಚಳವಳಿಗೆ ಬೆಂಬಲ ಸೂಚಿಸುವ ಸಾಂಕೇತಿಕ ಬಣ್ಣವಾಗಿ ಇದನ್ನು ಆಯ್ಕೆ ಮಾಡಲಾಗಿದೆ.
ಗಂಡುಮಕ್ಕಳಿಗೆ ಅನಗತ್ಯ ಆದ್ಯತೆಯ ಹಿನ್ನೆಲೆಯಲ್ಲಿ ದಂಪತಿಗಳು ಒಂದು ಗಂಡುಮಗು ಆಗುವವರೆಗೂ ಸಂತಾನಶಕ್ತಿ ಹರಣಕ್ಕೆ ಮುಂದಾಗದಿರುವುದನ್ನು ಕೂಡಾ ಸಮೀಕ್ಷೆ ಉಲ್ಲೇಖಿಸಿದೆ. ಇದರಿಂದಾಗಿ ದೇಶದಲ್ಲಿ 21 ದಶಲಕ್ಷ "ಅನಪೇಕ್ಷಿತ" ಹೆಣ್ಣುಮಕ್ಕಳ ವರ್ಗ ಸೃಷ್ಟಿಯಾಗಿದೆ ಎಂದು ವರದಿ ಹೇಳಿದೆ.
ಲಿಂಗಸಮಾನತೆ ನಿಟ್ಟಿನಲ್ಲಿ ವಿಶೇಷ ಒತ್ತು ನೀಡಬೇಕು ಎಂದು ಸಮೀಕ್ಷಾ ವರದಿ ಸೂಚಿಸಿದೆ. ದೇಶದ ಆರ್ಥಿಕ ಪ್ರಗತಿಯ ಹೊರತಾಗಿಯೂ ಗಂಡುಮಕ್ಕಳಿಗೆ ವಿಶೇಷ ಆದ್ಯತೆ, ಉದ್ಯೋಗ, ಗರ್ಭ ನಿರೋಧಕಗಳ ಬಳಕೆಯಂಥ ಹಲವು ಇತಿಮಿತಿಗಳು ಇರುವುದು ಆತಂಕಕಾರಿ ಬೆಳವಣಿಗೆ. ಭಾರತವು ವ್ಯಾಪಾರ ನಡೆಸಲು ಪೂರಕ ವಾತಾವರಣ ಸೃಷ್ಟಿಸುವ ಪ್ರಯತ್ನದ ಜತೆಗೆ ಲಿಂಗ ಸಮಾನತೆಯ ನಿಟ್ಟಿನಲ್ಲೂ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಭಾರತದಲ್ಲಿ ಉದ್ಯೋಗಸ್ಥ ಮಹಿಳೆಯರ ಪ್ರಮಾಣ 2005-06ರಲ್ಲಿ ಶೇಕಡ 36 ಇದ್ದುದು ಈಗ ಶೇಕಡ 24ಕ್ಕೆ ಇಳಿದಿರುವುದನ್ನೂ ಸಮೀಕ್ಷೆ ಬಹಿರಂಗಪಡಿಸಿದೆ. ಸರ್ಕಾರದ ಬೇಟಿ ಬಚಾವೋ, ಬೇಟಿ ಪಡಾವೊ, ಸುಕನ್ಯಾ ಸಮೃದ್ಧಿ ಯೋಜನೆಯಂಥ ವಿಶೇಷ ಪ್ರಯತ್ನಗಳು ಈ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಎಂದು ವರದಿ ಬಣ್ಣಿಸಿದೆ.