8 ತಿಂಗಳ ಮಗುವಿನ ಮೇಲೆ ಅತ್ಯಾಚಾರ
ರಾಜಧಾನಿಯಲ್ಲಿ ಮತ್ತೊಂದು ಭೀಕರ ಕೃತ್ಯ

ಹೊಸದಿಲ್ಲಿ, ಜ.30: ಸಂಬಂಧಿಕನೋರ್ವ 8 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ. ಮಗುವಿಗೆ ಮೂರು ಶಸ್ತ್ರಚಿಕಿತ್ಸೆಗಳ ಅಗತ್ಯವಿದ್ದು, ಮಗು ಐಸಿಯುನಲ್ಲಿದೆ ಎಂದು ವೈದ್ಯರು ಹೇಳಿದ್ದಾರೆ.
ತೀವ್ರ ರಕ್ತಸ್ರಾವವಾಗುತ್ತಿರುವ ಸ್ಥಿತಿಯಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಂದೆ ತಾಯಿಯರಿಬ್ಬರೂ ಮನೆಯಿಂದ ಹೊರಗೆ ತೆರಳಿದ್ದಾಗ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಾನು ಕೆಲಸಕ್ಕಾಗಿ ಮನೆಯಿಂದ ತೆರಳಿದ್ದೆ ಸ್ವಲ್ಪ ಸಮಯದ ನಂತರ ಪತ್ನಿಯೂ ಮನೆಯಿಂದ ಹೊರ ಬಂದಿದ್ದಳು” ಎಂದು ಮಗುವಿನ ತಂದೆ ತಿಳಿಸಿದ್ದಾರೆ. ಸಂಬಂಧಿಕರೊಬ್ಬರ ಬಳಿ ಮಗುವನ್ನು ಬಿಟ್ಟು ಹೋಗಲಾಗುತ್ತಿತ್ತು. ತಾಯಿ ಮನೆಗೆ ಹಿಂದಿರುಗಿದ್ದಾಗ ಮಗು ಅಳುತ್ತಿತ್ತು ಹಾಗು ಹಾಸಿಗೆ ತುಂಬಾ ರಕ್ತವಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.
ಘಟನೆಯ ನಂತರ ನಾಪತ್ತೆಯಾಗಿರುವ ಸಂಬಂಧಿಕನೊಬ್ಬನ ಬಗ್ಗೆ ಅನುಮಾನ ಇರುವುದಾಗಿ ಮಗುವಿನ ಹೆತ್ತವರು ತಿಳಿಸಿದ್ದಾರೆ.