ಕಾಸ್ಗಂಜ್ ಹೊತ್ತಿ ಉರಿಯುವಾಗ ಸಂಗೀತ ಪಾರ್ಟಿಯಲ್ಲಿ ಭಾಗವಹಿಸಿದ ಬಿಜೆಪಿ ಶಾಸಕರು!

ಲಕ್ನೋ, ಜ.30: ಉತ್ತರ ಪ್ರದೇಶದ ಕಾಸ್ಗಂಜ್ ಇತ್ತೀಚೆಗೆ ಕೋಮುಗಲಭೆಯಿಂದ ಕಂಗೆಟ್ಟಿದ್ದಾಗ ಅಲ್ಲಿನ ಇಬ್ಬರು ಬಿಜೆಪಿ ಶಾಸಕರು ಮ್ಯೂಸಿಕ್ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ ವಿಚಾರ ಬೆಳಕಿಗೆ ಬಂದಿದ್ದು, ಪಕ್ಷದೊಳಗೂ-ಹೊರಗೂ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.
ಗಲಭೆ ನಡೆದ ಸ್ಥಳದಿಂದ ಸುಮಾರು 32 ಕಿ.ಮೀ. ದೂರವಿರುವ ಇಟಾಹ್ ನಗರದಲ್ಲಿ ರವಿವಾರ ನಡೆದ ಕೈಲಾಶ್ ಖೇರ್ ಸಂಗೀತ ಕಾರ್ಯಕ್ರಮದಲ್ಲಿ ಅಮಾಪುರ್ ಶಾಸಕ ದೇವೇಂದ್ರ ಪ್ರತಾಪ್ ಸಿಂಗ್ ಹಾಗೂ ಕಾಸ್ ಗಂಜ್ ಶಾಸಕ ದೇವೇಂದ್ರ ಸಿಂಗ್ ಲೋಧಿ ಮೊದಲ ಸಾಲಿನಲ್ಲಿ ಕುಳಿತಿರುವುದು ಟಿವಿ ವಾಹಿನಿಗಳು ಪ್ರಸಾರ ಮಾಡಿದ ಸಂಗೀತ ಕಾರ್ಯಕ್ರಮದ ತುಣುಕಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಕಾರ್ಯಕ್ರಮದಲ್ಲಿ ಫಾರುಖಾಬಾದ್ ಬಿಜೆಪಿ ಸಂಸದ ಮುಕೇಶ್ ರಾಜಪುತ್ ಆವರೂ ಹಾಜರಿದ್ದರು.
ತಮ್ಮ ಕ್ಷೇತ್ರದಲ್ಲಿ ಗಲಭೆಗಳು ನಡೆಯುತ್ತಿರುವಾಗ ಅದರ ಪರಿವೆಯೇ ಇಲ್ಲದೆ ಈ ಶಾಸಕರು ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಜರಾಗಿರುವುದು ಅವರ ನಿರ್ಲಕ್ಷ್ಯತನವನ್ನು ಸೂಚಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ದೇವೇಂದ್ರ ಪ್ರತಾಪ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರ ಹೊರಬೀಳುತ್ತಿದ್ದಂತೆಯೇ ಸಮಜಾಯಿಷಿ ನೀಡಲು ಮುಂದಾಗಿರುವ ಶಾಸಕರು ತಾವು ಜನಪ್ರತಿನಿಧಿಗಳಾಗಿ ಕೇವಲ `ಹಾಜರಿ' ಹಾಕಲು ಹೋಗಿದ್ದೇ ವಿನಹ ಸಂಗೀತ ಕಾರ್ಯಕ್ರಮವನ್ನು ಆನಂದಿಸಲು ಅಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಮುಖ್ಯಮಂತ್ರಿ ಆದಿತ್ಯನಾಥ್ ಅಸಂತುಷ್ಟರಾಗಿದ್ದಾರೆಂದು ಅವರಿಗೆ ಹತ್ತಿರದ ಮೂಲಗಳು ತಿಳಿಸಿವೆ.