ಸಂಘಪರಿವಾರದ ಕಾರ್ಯಕರ್ತರು ಗುಂಡು ಹಾರಿಸುವ ವೀಡಿಯೋ ಬಹಿರಂಗ
ಕಾಸ್ಗಂಜ್ ಗಲಭೆ

ಆಗ್ರಾ, ಜ. 31: ಗಣರಾಜ್ಯೋತ್ಸವ ದಿನದಂದು ನಡೆದ ಮೆರವಣಿಗೆ ವೇಳೆ ಸಂಘಪರಿವಾರದ ಕಾರ್ಯಕರ್ತರು ಬಂದೂಕು ಒಯ್ಯುವ ಮತ್ತು ಗುಂಡು ಹಾರಿಸುತ್ತಿರುವ ಎನ್ನಲಾದ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮುಸ್ಲಿಂ ಬಾಹುಳ್ಯದ ಕಾಸ್ಗಂಜ್ ಪ್ರದೇಶದಲ್ಲಿ ಮೆರವಣಿಗೆ ನಡೆಯುವ ವೇಳೆ, ಕೆಲ ಯುವಕರು ಹಲವು ಸುತ್ತು ಗುಂಡು ಹಾರಿಸುತ್ತಿರುವ ದೃಶ್ಯ ವೀಡಿಯೊ ದಲ್ಲಿ ದಾಖಲಾಗಿದೆ. ಸ್ಥಳೀಯ ತಹಶೀಲ್ದಾರ್ ಕಚೇರಿಯ ಛಾವಣಿಯಿಂದ ಈ ವೀಡಿಯೊ ಸೆರೆ ಹಿಡಿಯಲಾಗಿದ್ದು, ಹಲವರು ದೊಣ್ಣೆ ಹಾಗೂ ಲಾಠಿಗಳನ್ನು ಬೀಸುತ್ತಿರುವುದು ಕೂಡಾ ದಾಖಲಾಗಿದೆ.
ಈ ಸಂದರ್ಭ ಭುಗಿಲೆದ ಹಿಂಸಾಚಾರದಲ್ಲಿ ಓರ್ವ ಬಲಿಯಾಗಿ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಉದ್ರಿಕ್ತ ಗುಂಪು ಹಲವು ವಾಹನಗಳಿಗೆ, ಮನೆ ಹಾಗು ಅಂಗಡಿಗಳಿಗೆ ಬೆಂಕಿ ಹಚ್ಚಿತ್ತು. ಕೆಲ ಧಾರ್ಮಿಕ ಕೇಂದ್ರಗಳನ್ನು ಗುರಿ ಮಾಡಿ ದಾಳಿ ನಡೆಸಲಾಗಿತ್ತು. ಈ ವೀಡಿಯೊ ಟೈಮ್ಸ್ ಆಫ್ ಇಂಡಿಯಾಗೆ ಲಭ್ಯವಾಗಿದ್ದು, ಈ ಹೊಸ ಆಯಾಮದಲ್ಲಿ ತನಿಖೆ ನಡೆಯುತ್ತಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
"ವೀಡಿಯೊ ತುಣುಕಿನಲ್ಲಿ ಬಂದೂಕಿನ ಸದ್ದು ಸ್ಪಷ್ಟವಾಗಿ ಕೇಳಿ ಬರುತ್ತಿದೆ. ಚಂದನ್ ಗುಪ್ತಾ (21) ಹತ್ಯೆಯಾದ ಸ್ಥಳದಲ್ಲೇ ಈ ಸದ್ದು ಕೇಳಿ ಬಂದಿದೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಐಪಿಎಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಈ ಸಾವಿನ ಸಂಬಂಧ ವಾಸೀಂ ಹಾಗೂ ಇತರ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೆರವಣಿಗೆಯಲ್ಲಿದ್ದ 50 ಯುವಕರ ಪೈಕಿ ಒಬ್ಬ ಭಾರತದ ರಾಷ್ಟ್ರ ಧ್ವಜ ಹಿಡಿದಿದ್ದ. ಕನಿಷ್ಠ ಇಬ್ಬರು ರಿವಾಲ್ವರ್ ಹೊಂದಿದ್ದರು ಹಾಗೂ ಇತರರು ಲಾಠಿಗಳನ್ನು ಹಿಡಿದಿದ್ದರು. ಇತರ ಕೆಲವು ಮಂದಿ ಮುಸ್ಲಿಂ ಜನ ಇರುವ ಪ್ರದೇಶದಲ್ಲಿ ಕಲ್ಲುತೂರಾಟ ನಡೆಸುತ್ತಿದ್ದರು. ತಿರಂಗಯಾತ್ರೆಯ ಹಲವು ಕಡೆ ಯುವಕರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. 14 ಸೆಕೆಂಡ್ಗಳ ಈ ವಿಡಿಯೊ ತುಣುಕಿನಲ್ಲಿ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.