ಗುಜರಾತ್: ಇಬ್ಬರು ಬಿಜೆಪಿ ಶಾಸಕರಿಂದ ಮಿತಿಮೀರಿ ಚುನಾವಣಾ ವೆಚ್ಚ

ಹೊಸದಿಲ್ಲಿ, ಜ. 31: ಶೇಕಡ 90ರಷ್ಟು ಮತದಾರರ ಟ್ರಸ್ಟ್ಗಳಿಂದ ದೇಣಿಗೆ ಬಿಜೆಪಿಗೆ ಹರಿದಿರುವ ವರದಿ ಬಹಿರಂಗವಾದ ಬೆನ್ನಲ್ಲೇ, ಗುಜರಾತ್ನ ಇಬ್ಬರು ಬಿಜೆಪಿ ಶಾಸಕರು ಚುನಾವಣಾ ಆಯೋಗ ನಿಗದಿಪಡಿಸಿದ್ದ ಮಿತಿಯನ್ನು ಮೀರಿ ವೆಚ್ಚ ಮಾಡಿರುವುದು ಬೆಳಕಿಗೆ ಬಂದಿದೆ.
ಕಳೆದ ಡಿಸೆಂಬರ್ನಲ್ಲಿ ನಡೆದ ಚುನಾವಣೆಯ ಪ್ರಚಾರದ ವೇಳೆ ಈ ಇಬ್ಬರು ಶಾಸಕರು ಅಧಿಕ ವೆಚ್ಚ ಮಾಡಿರುವುದನ್ನು ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಹಿರಂಗಡಿಸಿದೆ. ಹಿಮತ್ನಗರ ಕ್ಷೇತ್ರದ ಶಾಸಕ ರಾಜೇಂದ್ರ ಸಿಂಗ್ ಚಾವ್ಡಾ, ನಿಗದಿತ ಮಿತಿಗಿಂತ 5.87 ಲಕ್ಷ ರೂಪಾಯಿಗಳನ್ನು ಅಧಿಕವಾಗಿ ವೆಚ್ಚ ಮಾಡಿದ್ದರೆ, ಸಂತರಾಂಪುರ ಶಾಸಕ ಕುಬೇರ್ಭಾಯ್ ಮನಸುಖಭಾಯ್ ದಿಂದೋರ್ 95 ಸಾವಿರ ರೂಪಾಯಿ ಅಧಿಕ ವೆಚ್ಚ ಮಾಡಿದ್ದಾರೆ.
ಚುನಾವಣಾ ಅಯೋಗ ಪ್ರತಿ ಅಭ್ಯರ್ಥಿಗೆ ಗರಿಷ್ಠ 28 ಲಕ್ಷ ರೂಪಾಯಿ ವೆಚ್ಚದ ಮಿತಿ ನಿಗದಿಪಡಿಸಿದೆ. ಫಲಿತಾಂಶ ಪ್ರಕಟವಾದ 30 ದಿನಗಳ ಒಳಗಾಗಿ ಗೆದ್ದ ಅಭ್ಯರ್ಥಿಗಳು ಚುನಾವಣಾ ವೆಚ್ಚದ ವಿವರ ನೀಡುವುದು ಕಡ್ಡಾಯ. ಶೇಕಡ 30ರಷ್ಟು ಶಾಸಕರು ಆಯೋಗ ನಿಗದಿಪಡಿಸಿದ ಮಿತಿಯ ಅರ್ಧದಷ್ಟನ್ನು ಮಾತ್ರ ವೆಚ್ಚ ಮಾಡಿರುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕ ಸಮಾರಂಭಗಳಿಗೆ ಏನೂ ವೆಚ್ಚ ಮಾಡಿಲ್ಲ ಎಂದು ಏಳು ಶಾಸಕರು ಹೇಳಿದ್ದರೆ, 62 ಶಾಸಕರು ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಸ್ವಲ್ಪ ಹಣವನ್ನೂ ವ್ಯಯಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.