ಜಲಾಂತರ್ಗಾಮಿ ನೌಕೆ 'ಕಾರಂಜ್'ನೌಕಾದಳಕ್ಕೆ ಸಮರ್ಪಣೆ
.jpg)
ಮುಂಬೈ, ಜ.31: ದೇಶೀಯವಾಗಿ ನಿರ್ಮಿಸಲ್ಪಟ್ಟ ಸ್ಕಾರ್ಪಿನ್ ಶ್ರೇಣಿಯ ಮೂರನೇ ಸಬ್ಮೆರೀನ್ , ‘ಕಾರಂಜ್’ ಅನ್ನು ಮಝಗಾಂವ್ ಡಾಕ್ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ನೌಕಾಪಡೆಯ ಪರೀಕ್ಷಾರ್ಥ ಪ್ರಯೋಗಗಳಿಗೆ ಅನಾವರಣಗೊಳಿಸಲಾಗಿದೆ.
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬ ಮುಖ್ಯ ಅತಿಥಿಯಾಗಿದ್ದು, ಅವರ ಪತ್ನಿ ರೀನಾ ಲಾಂಬ ಸಬ್ಮೆರಿನನ್ನು ಅನಾವರಣಗೊಳಿಸಿದರು. ಕಠಿಣ ಪರೀಕ್ಷೆಯ ಬಳಿಕ ಈ ಸಬ್ಮೆರಿನ್ ನೌಕಾಪಡೆಯ ಶಸ್ತ್ರಾಸ್ತ್ರ ವಿಭಾಗಕ್ಕೆ ಸೇರ್ಪಡೆಯಾಗಲಿದೆ.
ಅತ್ಯಂತ ರಹಸ್ಯವಾಗಿ ಚಲಿಸುವ ಈ ಸಬ್ಮೆರಿನ್ ನಿರ್ದಿಷ್ಟ ಗುರಿಯ ಮೇಲೆ ನಿಖರವಾಗಿ ಘಾತಕ ಆಕ್ರಮಣ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ. ನಿಶ್ಯಬ್ಧವಾಗಿ ಕಾರ್ಯಾಚರಿಸುವ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಸಬ್ಮೆರಿನ್ ನೆಲದ ಮೇಲಿನ ಹಾಗೂ ನೀರಿನ ಮೇಲಿನ ಗುರಿಯ ಮೇಲೆ ದಾಳಿ ನಡೆಸುವ ಸಾಮರ್ಥ್ಯದ ಜೊತೆ, ಗುಪ್ತಚರ ಮಾಹಿತಿ ಸಂಗ್ರಹಣೆ, ಸ್ಪೋಟಕಗಳನ್ನು ಇಡುವುದು, ಪ್ರದೇಶದ ಗಸ್ತು ಕಾರ್ಯ ಮುಂತಾದ ಕಾರ್ಯಗಳನ್ನು ನಿರ್ವಹಿಸಲಿದೆ.
ಹಿಂದೂ ಮಹಾಸಾಗರದಲ್ಲಿ ಚೀನಾದ ನೌಕಾಪಡೆಯ ಬಲವರ್ಧನೆಯ ಹಿನ್ನೆಲೆಯಲ್ಲಿ ಸ್ಕಾರ್ಪಿನ್ ಶ್ರೇಣಿಯ ಸಬ್ಮೆರಿನ್ಗಳು ಭಾರತೀಯ ನೌಕಾಪಡೆಯ ಯುದ್ಧಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ. ಕಳೆದ ವರ್ಷ ಪ್ರಥಮ ಸ್ಕಾರ್ಪಿನ್ ಸಬ್ಮೆರಿನ್ ‘ಐಎನ್ಎಸ್ ಕಲ್ವರಿ’ಯನ್ನು ನೌಕಾಪಡೆಗೆ ನಿಯೋಜಿಸಲಾಗಿದೆ. ಇದೀಗ ಎರಡನೇ ಸ್ಕಾರ್ಪಿನ್ ಸಬ್ಮೆರಿನ್ ಅನಾವರಣಗೊಳಿಸಲಾಗಿದ್ದು ಕಠಿಣ ಪರೀಕ್ಷಾ ಪ್ರಯೋಗದ ಬಳಿಕ ಅತೀ ಶೀಘ್ರದಲ್ಲಿ ನೌಕಾಪಡೆಯ ಕಾರ್ಯಕ್ಕೆ ನಿಯೋಜನೆಗೊಳ್ಳಲಿದೆ.