ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ: ಕೇರಳದ 41 ಶಿಫಾರಸುಗಳನ್ನು ತಿರಸ್ಕರಿಸಿದ ಕೇಂದ್ರ ಸರಕಾರ

ತಿರುವನಂತಪುರಂ, ಜ. 31: ಈ ಸಲದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಿಗೆ ಕೇರಳ ಸರಕಾರ ಶಿಫಾರಸು ಮಾಡಿದ್ದ 42 ಮಂದಿಯಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಿ ಉಳಿದ 41 ಮಂದಿಗೆ ಪ್ರಶಸ್ತಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ . ಕೇರಳ ಸರಕಾರದ ಶಿಫಾರಸು ಪಟ್ಟಿಯಲ್ಲಿದ್ದ ಮಾರ್ ಕ್ರಿಸೊಸ್ಟರಿಗೆ ಮಾತ್ರ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.
ಆರೆಸ್ಸೆಸ್ ಚಿಂತಕ ಪಿ.ಪರಮೇಶ್ವರನ್ರಿಗೆ ಪದ್ಮವಿಭೂಷಣ, ಡಾ. ಎಂಆರ್ ರಾಜಗೋಪಾಲ್ ಮತ್ತು ತಿರುವನಂತಪುರಂ ಲಕ್ಷ್ಮಿಕುಟ್ಟಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಇವರನ್ನು ಕೇರಳ ಸರಕಾರ ಶಿಫಾರಸು ಮಾಡಿರಲಿಲ್ಲ. ಇದು ಸಾಮಾಜಿಕ ಕಾರ್ಯಕರ್ತ ಜೋಮೋನ್ ಪುತ್ತನ್ ಪುರಯ್ಕಲ್, ಆರ್ ಟಿಐ ಪ್ರಕಾರ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಪಡೆದುಕೊಂಡ ವಿವರಗಳಲ್ಲಿ ತಿಳಿದುಬಂದಿದೆ. ಎಂಟಿ ವಾಸುದೇವನ್ ನಾಯರ್ ಹೆಸರನ್ನು ಪದ್ಮವಿಭೂಷಣಕ್ಕೆ ಶಿಫಾರಸು ಮಾಡಲಾಗಿತ್ತು. ಕಲಾಮಂಡಲಂ ಗೋಪಿ ಆಶಾನ್, ಮಮ್ಮುಟ್ಟಿ, ಮೋಹನ್ಲಾಲ್, ಪೆರುವನಂ ಕುಟ್ಟನ್ಮಾರಾರ್, ಕವಯಿತ್ರಿ ಸುಗದಕುಮಾರಿ, ಡಾ.ಫಿಲಿಪ್ಪೋಸ್ ಮಾರ್ಕ್ರಿಸೋಸ್ಟರನ್ನು ಪದ್ಮಭೂಷಣಕ್ಕೆ ಕೇರಳ ಸರಕಾರ ಶಿಫಾರಸು ಮಾಡಿತ್ತು. ಇವರಲ್ಲಿ ಮಾರ್ ಕ್ರಿಸೊಸ್ಟರಿಗೆ ಮಾತ್ರ ಪದ್ಮಭೂಷಣ ನೀಡಲಾಗಿದೆ. ಪದ್ಮಶ್ರೀಗೆ 35 ಮಂದಿಯನ್ನು ಸರಕಾರ ಶಿಫಾರಸು ಮಾಡಿತ್ತು.