ಲೈಂಗಿಕ ಕಿರುಕುಳ: ದಕ್ಷಿಣ ಭಾರತದ ಚಿತ್ರನಟಿಯಿಂದ ದೂರು

ಚೆನ್ನೈ, ಫೆ. 1: ಪ್ರತಿಷ್ಠಿತ ಸ್ಟುಡಿಯೊ ಒಂದರಲ್ಲಿ ನೃತ್ಯ ಅಭ್ಯಾಸ ವೇಳೆ ಆಗಂತುಕರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಟಿ.ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಿಹೈಂಡ್ವುಡ್ಸ್ ವರದಿ ಪ್ರಕಾರ, ಮಲೇಷ್ಯಾದಲ್ಲಿ ನಡೆಯಲಿರುವ ಸಮಾರಂಭವೊಂದಕ್ಕೆ ನೃತ್ಯ ರಿಹರ್ಸಲ್ ನಡೆಸುವ ವೇಳೆ ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ನಟಿ, "ನಾನು ನೃತ್ಯಾಭ್ಯಾಸ ವೇಳೆ ಏಕಾಂಗಿಯಾಗಿದ್ದಾಗ ಆ ವ್ಯಕ್ತಿ ಬಂದು, ಲೈಂಗಿಕ ವ್ಯಾಪಾರಕ್ಕಾಗಿ ನನ್ನನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡಿದ. ಮತ್ತೊಬ್ಬ ವ್ಯಕ್ತಿ ಲೈಂಗಿಕ ಸುಖ ಬಯಸಿದ. ಇದು ತೀರಾ ಅಸಹ್ಯಕರ. ಇದರಿಂದ ನನಗೆ ಆಘಾತವಾಗಿದ್ದು, ಅವಮಾನವಾಗಿದೆ. ಆದ್ದರಿಂದ ಇದು ಸುರಕ್ಷಿತವಲ್ಲ ಎಂಬ ಭಾವನೆ ನನ್ನಲ್ಲಿ ಬಂತು. ಆದ್ದರಿಂದ ದೂರು ನೀಡಿದ್ದೇನೆ" ಎಂದು ವಿವರಿಸಿದರು.
ಆ ವ್ಯಕ್ತಿಗಳ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಅವರು ನನ್ನ ನೃತ್ಯಾಭ್ಯಾಸದ ವೇಳಾಪಟ್ಟಿ ತಿಳಿದಿದ್ದಾರೆ ಎಂದು ಕಾಲಿವುಡ್ ಕೊರಿಯೋಗ್ರಾಫರ್ ಶ್ರೀಧರ್ ಅವರ ಸ್ಟುಡಿಯೊದಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ನಟಿ ಹೇಳಿದರು. ಶ್ರೀಧರ್ ಅವರಿಗೆ ಬಹುಶಃ ಇದು ತಿಳಿದಿರಲಾರದು. ಕಾರ್ಯಕ್ರಮ ಆಯೋಜಕರ ತಂಡದ ಕೆಲವರು ನೃತ್ಯಾಭ್ಯಾಸದ ಮಾಹಿತಿ ಸೋರಿಕೆ ಮಾಡಿರಬೇಕು ಎಂಬ ಸಂದೇಹ ವ್ಯಕ್ತಪಡಿಸಿದರು.
ಸ್ವತಂತ್ರ ಉದ್ಯೋಗಸ್ಥ ಮಹಿಳೆಯಾಗಿ ಮುಕ್ತವಾಗಿ ಕೆಲಸ ಮಾಡಲು ಅವಕಾಶವಿರಬೇಕು. ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ತಾವು ಸುರಕ್ಷಿತ ಎಂಬ ಭಾವನೆ ಬರುವಂತಿರಬೇಕು. ಈ ಕಾರಣದಿಂದ ದೂರು ನೀಡಿದ್ದಾಗಿ ಸ್ಪಷ್ಟಪಡಿಸಿದರು.
ಸೂಸಿ ಗಣೇಶನ್ ಅವರ ತಿರುಟ್ಟುಪಯಲೆ-2 ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿರುವ ನಟಿ, ಮಲೇಷ್ಯಾದಲ್ಲಿ ನಡೆಯಲಿರುವ "ಡಾಝ್ಲಿಂಗ್ ಥಮಿಝಾಚಿ" ಕಾರ್ಯಕ್ರಮಕ್ಕೆ ಅಭ್ಯಾಸ ನಡೆಸುತ್ತಿದ್ದಾರೆ.