ದೇಶದ 10 ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದಷ್ಟು ಆರೋಗ್ಯ ವಿಮೆ
ಕೇಂದ್ರ ಬಜೆಟ್ ನಲ್ಲಿ ಘೋಷಣೆ

ಹೊಸದಿಲ್ಲಿ,ಫೆ.1 : ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಯೊಂದನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಮಂಡಿಸಿದ ಮುಂಗಡಪತ್ರದಲ್ಲಿ ಘೋಷಿಸಿದ್ದಾರೆ. ಈ ಯೋಜನೆಯನ್ವಯ ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ. 5 ಲಕ್ಷದ ತನಕ ಆರೋಗ್ಯ ವಿಮಾ ಹಣ ಲಭ್ಯವಾಗಲಿದೆ. ಈ ಯೋಜನೆಯು ದೇಶದ 10 ಕೋಟಿ ಬಡ ಕುಟುಂಬಗಳ ಸುಮಾರು 50 ಕೋಟಿ ಜನರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಕಾರ್ಯಕ್ರಮದ ಅಂಗವಾಗಿ ವಿತ್ತ ಸಚಿವರು ಎರಡು ಹೊಸ ಯೋಜನೆಗಳನ್ನು ಘೋಷಿಸಿದ್ದು ಇವುಗಳಿಗೆ ರೂ. 1,200 ಕೋಟಿ ನಿಗದಿ ಪಡಿಸಲಾಗಿದೆ. ಇದು ವಿಶ್ವದ ಅತ್ಯಂತ ದೊಡ್ಡ ಸರಕಾರಿ ಪ್ರಾಯೋಜಿತ ಆರೋಗ್ಯ ಸೇವಾ ಯೋಜನೆಯಾಗಲಿದೆ ಎಂದು ಜೇಟ್ಲಿ ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ಆರೋಗ್ಯ ನೀತಿ 2017 ಅಂಗವಾಗಿ ಕೇಂದ್ರವು ರೂ. 1,200 ಕೋಟಿ ಹಣವನ್ನು ಉಚಿತ ರೋಗ ತಪಾಸಣೆ ಹಾಗೂ ಔಷಧಿ ವಿತರಣೆಗಾಗಿ 1.5 ಲಕ್ಷ ಕೇಂದ್ರಗಳಿಗೆ ಒದಗಿಸಲಾಗುವುದು.
ಸರ್ವರನ್ನೂ ಆರೋಗ್ಯ ವಿಮಾ ಯೋಜನೆಯಡಿ ತರುವ ತನ್ನ ಗುರಿಯತ್ತ ಸರಕಾರ ಮುಂದುವರಿದಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಆರೋಗ್ಯ ವಿಮಾ ಕ್ಷೇತ್ರದಲ್ಲಿ ಆಯುಷ್ಮಾನ್ ಭಾರತ ಯೋಜನೆ ಅಭೂತಪೂರ್ವ ಕ್ರಮವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. "ದೇಶದ 10 ಕೋಟಿ ಜನರನ್ನು ಅಂದರೆ ಶೇ 40ರಷ್ಟು ಜನಸಂಖ್ಯೆಗೆ ವಾರ್ಷಿಕ ರೂ 5 ಲಕ್ಷದಷ್ಟು ಆರೋಗ್ಯ ವಿಮೆ ಒದಗಿಸುವ ಯೋಜನೆ ವಿಶ್ವದಲ್ಲಿಯೇ ಮೊದಲು'' ಎಂದು ಶಾ ಟ್ವೀಟ್ ಮಾಡಿದ್ದಾರೆ.