ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣ : ಉಲ್ಟಾ ಹೊಡೆದ ಇನ್ನೊಬ್ಬ ಪ್ರಮುಖ ಸಾಕ್ಷಿ

ಮುಂಬೈ,ಫೆ.1 : ಪ್ರಥಮ ಬಾರಿಗೆ ತೆರೆದ ನ್ಯಾಯಾಲಯದಲ್ಲಿ ನಡೆದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದ ವಿಚಾರಣೆ ಇಲ್ಲಿ ಬುಧವಾರ ನಡೆದಾಗ ಇನ್ನೊಬ್ಬ ಪ್ರಾಸಿಕ್ಯೂಶನ್ ಪರ ಸಾಕ್ಷಿ ತಿರುಗಿ ಬಿದ್ದಿದ್ದಾರೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮಾಧ್ಯಮಗಳು ಹಾಜರಿರುವಂತಿಲ್ಲ ಎಂದು ನವೆಂಬರ್ 29ರಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದ್ದರೂ ಬಾಂಬೆ ಹೈಕೋರ್ಟ್ ಆ ತೀರ್ಪನ್ನು ಬದಿಗಿರಿಸಿದ ಕಾರಣ ಬುಧವಾರ ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.
ರಸ್ತೆ ಬದಿಯ ಹೋಟೆಲ್ ಮಾಲಕರೊಬ್ಬರು ಬುಧವಾರ ವಿಚಾರಣೆಗೆ ಹಾಜರಾದರೂ ಅವರು ಪ್ರಾಸಿಕ್ಯೂಶನ್ ವಾದವನ್ನು ಸಮರ್ಥಿಸದ ಕಾರಣ ಅವರು ತಿರುಗಿ ಬಿದ್ದಿದ್ದಾರೆಂದು ಘೋಷಿಸಲಾಗಿದೆ
ಈ ವಿವಾದಿತ ಪ್ರಕರಣದಲ್ಲಿ ಇಲ್ಲಿಯವರೆಗೆ ತಿರುಗಿ ಬಿದ್ದಿರುವ ಸಾಕ್ಷಿದಾರರ ಸಂಖ್ಯೆ 29 ಆಗಿದೆ. ಮಾಧ್ಯಮಗಳಿಗೆ ಪ್ರವೇಶಾನುಮತಿ ಇಲ್ಲದೆ ಕಳೆದೆರಡು ತಿಂಗಳುಗಳ ಕಾಲ ನಡೆದ ವಿಚಾರಣೆ ವೇಳೆ 28 ಮಂದಿ ಸಾಕ್ಷಿಗಳು ತಿರುಗಿ ಬಿದ್ದಿದ್ದರು.ಇಲ್ಲಿಯವರೆಗೆ ಒಟ್ಟು 41 ಸಾಕ್ಷಿಗಳ ವಿಚಾರಣೆ ನಡೆದಿದೆ.
ಸಿಬಿಐ ಪ್ರಕಾರ ಬುಧವಾರ ನ್ಯಾಯಾಲಯಕ್ಕೆ ಹಾಜರಾದ ಸಾಕ್ಷಿದಾರರು ಶಂಕಿತ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಸಾವಿಗೀಡಾಗಿದ್ದ ತುಳಸೀರಾಂ ಪ್ರಜಾಪತಿಯನ್ನು ಪೊಲೀಸ್ ಕಾರಿನಲ್ಲಿ ನೋಡಿದ್ದರು. ಆದರೆ ನ್ಯಾಯಾಲಯದಲ್ಲಿ ಆತ ಇದನ್ನು ಪುಷ್ಠೀಕರಿಸಿಲ್ಲ.
ಉಗ್ರ ನಂಟು ಹೊಂದಿದ್ದಾನೆಂದು ಆರೋಪಿಸಲಾಗಿದ್ದ ಸೊಹ್ರಾಬುದ್ದೀನ್ ಶೇಖ್ ಮತ್ತಾತನ ಪತ್ನಿ ಕೌಸರ್ ಬೀ ಇಬ್ಬರನ್ನೂ ಗುಜರಾತ್ ಪೊಲೀಸರ ಉಗ್ರ ನಿಗ್ರಹ ಪಡೆಯು ಅವರು ಮಹಾರಾಷ್ಟ್ರದ ಸಾಂಗ್ಲಿಯತ್ತ ಸಾಗುತ್ತಿದ್ದಾಗ ಹೈದರಾಬಾದ್ ನಗರದಲ್ಲಿ ಅವರನ್ನು ನವೆಂಬರ್ 2005ರಲ್ಲಿ ಅಪಹರಿಸಿತ್ತು ಎಂದು ಆರೋಪಿಸಲಾಗಿತ್ತು.
ಸೊಹ್ರಾಬುದ್ದೀನ್ ನನ್ನು ಗಾಂಧಿನಗರ ಸಮೀಪ ಶಂಕಿತ ನಕಲಿ ಎನ್ಕೌಂಟರ್ ಒಂದರಲ್ಲಿ ಸಾಯಿಸಲಾಗಿದ್ದರೆ, ಆತನ ಪತ್ನಿ ನಾಪತ್ತೆಯಾಗಿದ್ದಳು. ಸೊಹ್ರಾಬುದ್ದೀನ್ ಸಹವರ್ತಿ ಹಾಗೂ ಎನ್ಕೌಂಟರ್ ಪ್ರಕರಣದ ಪ್ರತ್ಯಕ್ಷದರ್ಶಿ ಸಾಕ್ಷಿಯಾಗಿದ್ದ ಪ್ರಜಾಪತಿಯನ್ನು ಪೊಲೀಸರು ಗುಜರಾತ್ ರಾಜ್ಯದ ಬಾನಸ್ಕಂತ ಜಿಲ್ಲೆಯ ಛಪ್ರಿ ಎಂಬ ಗ್ರಾಮದಲ್ಲಿ ಡಿಸೆಂಬರ್ 2006ರಲ್ಲಿ ಎನ್ಕೌಂಟರ್ ಒಂದರಲ್ಲಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿತ್ತು.