‘ಮೋದಿ ಕೇರ್’ನ ವಾರ್ಷಿಕ ವೆಚ್ಚ ಎಷ್ಟು ಸಾವಿರ ಕೋಟಿ ರೂ. ಗೊತ್ತಾ ?

ಹೊಸದಿಲ್ಲಿ, ಫೆ.2: ‘ಮೋದಿ ಕೇರ್’ ಎಂದೇ ಹೆಸರಾಗಿರುವ , ದೇಶದ ಜನಸಂಖ್ಯೆಯ ಸುಮಾರು ಅರ್ಧಾಂಶದಷ್ಟು ಜನರನ್ನು ತಲುಪುವ ಉದ್ದೇಶದ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಗೆ ವಾರ್ಷಿಕ 11,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ದೇಶದ ಜನಸಂಖ್ಯೆಯ ಶೇ.40ರಷ್ಟಿರುವ 10 ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ.ನಷ್ಟು ಆರೋಗ್ಯ ವಿಮೆ ಸೌಲಭ್ಯ ನೀಡುವ ಈ ಯೋಜನೆಯನ್ನು ಗುರುವಾರ ಮಂಡಿಸಿದ ಬಜೆಟ್ನಲ್ಲಿ ಘೋಷಿಸಲಾಗಿದೆ. ಪ್ರತೀ ಕುಟುಂಬಕ್ಕೆ ವಿಮಾ ಖರ್ಚಿನ ಮೊತ್ತ 1,100 ರೂ. ಎಂದು ಸರಕಾರ ಅಂದಾಜು ಮಾಡಿದೆ. 2018-19ರಲ್ಲಿ ಈ ಯೋಜನೆಗೆ ಕೇಂದ್ರ ಸರಕಾರ 2,000 ಕೋಟಿ ರೂ. ಅನುದಾನ ನಿಗದಿಗೊಳಿಸಿದೆ. ಈ ಯೋಜನೆ ಮುಂದುವರಿಯಲಿರುವ ಕಾರಣ ಇನ್ನಷ್ಟು ಅನುದಾನವನ್ನು ಲಭ್ಯಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ಹಲವಾರು ರಾಜ್ಯ ಸರಕಾರಗಳು ತಮ್ಮದೇ ಆದ ಕೆಲವೊಂದು ಆರೋಗ್ಯ ವಿಮಾ ಯೋಜನೆಗಳನ್ನು ಹೊಂದಿದ್ದರೂ ಇವು ಸಣ್ಣ ಪ್ರಮಾಣ ವಿಮಾ ಯೋಜನೆಗಳಾಗಿವೆ ಹಾಗೂ ಸೂಕ್ತವಾಗಿ ಅನುಷ್ಠಾನಗೊಂಡಿಲ್ಲ.
ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ ಈ ರೀತಿಯ ಜನಪ್ರಿಯ ಆರೋಗ್ಯವಿಮಾ ಯೋಜನೆಯ ಮೂಲಕ ಗ್ರಾಮೀಣ ಮತದಾರರ ಮನ ಗೆಲ್ಲಲು ಪ್ರಧಾನಿ ಮೋದಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಯೋಜನೆ ವಿಶ್ವದ ಅತೀ ದೊಡ್ಡ ಸರಕಾರಿ ಅನುದಾನಿತ ಆರೋಗ್ಯ ಸುರಕ್ಷಾ ಯೋಜನೆ ಎಂದು ಹೇಳಲಾಗುತ್ತಿದೆ. ಆದರೆ ಕೇಂದ್ರ ಸರಕಾರ 2018-19ರ ಸಾಲಿಗೆ ಮೀಸಲಿರಿಸಿದ 2,000 ಕೋಟಿ ರೂ. ಅನುದಾನ ಸಾಕಾದೀತೇ ಎಂದು ಸರಕಾರದ ಟೀಕಾಕಾರರು ಸಂದೇಹ ವ್ಯಕ್ತಪಡಿಸಿದ್ದಾರೆ.
ಆದರೆ ಅಧಿಕಾರಿಗಳ ಪ್ರಕಾರ, ಈ ಯೋಜನೆಗೆ 11,000 ಕೋಟಿ ರೂ. ಪ್ರೀಮಿಯಂ ಮೊತ್ತದ ಅಗತ್ಯವಿದ್ದು ಸರಕಾರ 7,000 ಕೋಟಿ ರೂ. ಭರಿಸಲಿದೆ.ಉಳಿದ ಮೊತ್ತವನ್ನು 29 ರಾಜ್ಯಗಳು ಭರಿಸಲಿವೆ. ಮುಂದಿನ ತಿಂಗಳಲ್ಲಿ ಈ ಯೋಜನೆಯ ಸಂಪೂರ್ಣ ವಿವರವನ್ನು ನಿರ್ಧರಿಸಲಾಗುತ್ತದೆ. ಸರಕಾರಿ ಆರೋಗ್ಯ ವಿಮಾ ಸಂಸ್ಥೆಗಳು ಈ ಯೋಜನೆಗೆ ಹಣ ಪೂರೈಸಲು ಒಪ್ಪಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ.