ಮಾನೆಸರ್ ಭೂಹಗರಣ: ಹೂಡಾ ಸೇರಿ 30 ಮಂದಿ ವಿರುದ್ಧ ಸಿಬಿಐ ಚಾರ್ಜ್ಶೀಟ್

ಹೊಸದಿಲ್ಲಿ, ಫೆ.2: ಮಾನೆಸರ್ ಭೂಹಗರಣಕ್ಕೆ ಸಂಬಂಧಿಸಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ಇತರ 34 ಮಂದಿಯ ವಿರುದ್ಧ ಸಿಬಿಐ ಶುಕ್ರವಾರ ದೋಷಾರೋಪ ಪಟ್ಟಿಯನ್ನು ದಾಖಲಿಸಿದೆ.
ಕ್ರಿಮಿನಲ್ ಸಂಚು ಹಾಗೂ ವಂಚನೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ನಿಯಮಾವಳಿಗಳಡಿ ಪ್ರಕರಣ ದಾಖಲಿಸಲಾಗಿದೆ.
ಭೂಪಿಂದರ್ ಸಿಂಗ್ ಹೂಡಾ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಹರ್ಯಾಣ ಸರಕಾರದ ಹಿರಿಯ ಅಧಿಕಾರಿಯಾಗಿದ್ದ , ಕೇಂದ್ರೀಯ ಲೋಕಸೇವಾ ಆಯೋಗದ ಮಾಜಿ ಸಚಿವ ಚತ್ತರ್ಸಿಂಗ್ ಅವರನ್ನು ದೋಷಾರೋಪ ಪಟ್ಟಿಯಲ್ಲಿ ಆರೋಪಿಯಾಗಿ ಹೆಸರಿಸಲಾಗಿದೆ.
ಮಾರುಕಟ್ಟೆ ಮೌಲ್ಯವು ಪ್ರತಿ ಎಕರೆಗೆ 4 ಕೋಟಿ ರೂ. ಇದ್ದಂತಹ 400 ಎಕರೆ ಜಮೀನನ್ನು ಖಾಸಗಿ ಬಿಲ್ಡರ್ಗಳು ಮತ್ತಿತರು ಹರ್ಯಾಣ ಸರಕಾರಿ ಅಧಿಕಾರಿಗಳ ಜೊತೆ ಸಂಚು ನಡೆಸಿ ಕೇವಲ 100 ಕೋಟಿ ರೂ.ಗೆ ಖರೀದಿಸಿದ್ದಾರೆಂದು ದೋಷಾರೋಪಪಟ್ಟಿಯಲ್ಲಿ ಸಿಬಿಐ ಆರೋಪಿಸಿದೆ. 2004ರ ಆಗಸ್ಟ್ 27ರಿಂದ 2007ರ ಆಗಸ್ಟ್ 24ರ ನಡುವೆ, ಜಮೀನನ್ನು ಸರಕಾರವು ವಶಕ್ಕೆ ತೆಗೆದುಕೊಳ್ಳುವ ಅಪಾಯವಿದೆಯೆಂದು ನಂಬಿಸಿ ಅದನ್ನು ಸಂಬಂಧಪಟ್ಟ ಮಾಲಕರಿಂದ ಕನಿಷ್ಠ ಬೆಲೆಗೆ ಖರೀದಿಸಲಾಗಿತ್ತೆಂದು ಆರೋಪಿಸಲಾಗಿದೆ.
ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಜಮೀನನ್ನು ಖರೀದಿಸಿದ ಹಿನ್ನೆಲೆಯಲ್ಲಿ ಗುರ್ಗಾಂವ್ನ ಮಾನೇಸರ್, ನೌರಂಗ್ಪುರ ಹಾಗೂ ಲಕ್ನೌಲಾ ಗ್ರಾಮಗಳ ಭೂಮಾಲಕರಿಗೆ ಅಂದಾಜು 1500 ಕೋಟಿ ರೂ. ನಷ್ಟವಾಗಿದೆಯೆಂದು ಸಿಬಿಐ ಚಾರ್ಜ್ಶೀಟ್ನಲ್ಲಿ ತಿಳಿಸಿದೆ.
ಗ್ರಾಮಸ್ಥರಿಂದ ಜಮೀನನ್ನು ವಶಪಡಿಸಿಕೊಳ್ಳುವುದಕ್ಕಾಗಿ ಸರಕಾರವು ಆರಂಭದಲ್ಲಿ ಭೂಸ್ವಾಧೀನ ಕಾಯ್ದೆಯಡಿ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಮೂರು ಗ್ರಾಮಗಳ 912 ಎಕರೆ ಪ್ರದೇಶದಲ್ಲಿ ಮಾದರಿ ಕೈಗಾರಿಕಾ ಪಟ್ಟಣವೊಂದನ್ನು ಸ್ಥಾಪಿಸುವುದಕ್ಕಾಗಿ ಜಮೀನನ್ನು ಸ್ವಾಧೀನಪಡಿಸಲಾಗುವುದೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.