ಚುನಾವಣಾ ಬಾಂಡ್ ವ್ಯವಸ್ಥೆ ಜಾರಿ ಪ್ರಶ್ನಿಸಿ ಸಿಪಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ಹೊಸದಿಲ್ಲಿ, ಫೆ.2: ಚುನಾವಣೆಯಲ್ಲಿ ಪಕ್ಷಗಳು ಸ್ವೀಕರಿಸುವ ದೇಣಿಗೆ ಪ್ರಕ್ರಿಯೆಗೆ ಬಾಂಡ್ ವ್ಯವಸ್ಥೆ ಜಾರಿಗೊಳಿಸುವ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಿಪಿಎಂ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ರಾಜಕೀಯ ಪಕ್ಷವು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಾಧೀಶರಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ಚುನಾವಣಾ ಬಾಂಡ್ ಜಾರಿಗೆ ತರುವ ನಿರ್ಧಾರವನ್ನು ರದ್ದುಮಾಡಬೇಕು. ಅದರ ಬದಲು, ಚುನಾವಣಾ ದೇಣಿಗೆಗಳನ್ನು ಚುನಾವಣಾ ಆಯೋಗದ ಮೂಲಕ ನೀಡುವ ಕ್ರಮ ಜಾರಿಗೆ ಬರಬೇಕು ಎಂದು ಸಿಪಿಎಂ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ. ಬಾಂಡ್ ವ್ಯವಸ್ಥೆಯಿಂದ ಪಾರದರ್ಶಕತೆ ಇರುವುದಿಲ್ಲ. ದೇಣಿಗೆ ನೀಡಿದವರ ಮಾಹಿತಿ ಕಾರ್ಪೊರೇಟ್ ಸಂಸ್ಥೆ ಹಾಗೂ ಸರಕಾರಕ್ಕೆ ಮಾತ್ರ ತಿಳಿದಿರುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಚುನಾವಣಾ ಬಾಂಡ್ಗಳಲ್ಲಿ ಸೇರಿಸಲಾಗಿರುವ ‘ಬಹಿರಂಗಗೊಳಿಸಬಾರದು’ ಎಂಬ ಷರತ್ತು ದೇಣಿಗೆಯಲ್ಲಿ ಅಸ್ಪಷ್ಟತೆಗೆ ಕಾರಣವಾಗುತ್ತದೆ ಮತ್ತು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.
ಚುನಾವಣಾ ಬಾಂಡ್ ಯೋಜನೆಯ ಪ್ರಕಾರ 1,000; 10,000; 1 ಲಕ್ಷ; 10 ಲಕ್ಷ ; 1 ಕೋಟಿ ರೂ. ಮುಖಬೆಲೆಯ ಬಾಂಡ್ಗಳು ಸ್ಟೇಟ್ಬ್ಯಾಂಕ್ನ ನಿರ್ದಿಷ್ಟ ಶಾಖೆಗಳಲ್ಲಿ ದೊರೆಯುತ್ತದೆ. ಇವನ್ನು ಖರೀದಿಸಿ ದೇಣಿಗೆದಾರರು ತಮ್ಮ ಆಯ್ಕೆಯ ರಾಜಕೀಯ ಪಕ್ಷಗಳಿಗೆ ನೀಡಬಹುದು. ಸಂಬಂಧಿತ ಪಕ್ಷಗಳು ಇದನ್ನು ಸ್ವೀಕರಿಸಿದ 15 ದಿನದೊಳಗೆ ತಮ್ಮ ಖಾತೆಗೆ ನಗದೀಕರಿಸಬೇಕು.