ಈರುಳ್ಳಿ ದುಬಾರಿ: ಗ್ರಾಹಕರ ಕಣ್ಣಲ್ಲಿ ನೀರು

ಹೊಸದಿಲ್ಲಿ, ಫೆ.3: ದೇಶದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಗಳು ಎನಿಸಿದ ಲಸಾಸ್ಗಾಂವ್, ಪಿಂಪಲ್ಗಾಂವ್ ಮತ್ತು ಬೆಂಗಳೂರಿನಲ್ಲಿ ಈರುಳ್ಳಿ ಸಗಟು ದರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 400ರಷ್ಟು ಏರಿಕೆಯಾಗಿರುವುದು ಗ್ರಾಹಕರಲ್ಲಿ ಕಣ್ಣೀರು ತರಿಸಿದೆ.
ದುಬಾರಿ ದರದಿಂದಾಗಿ ವಹಿವಾಟು ಕೂಡಾ ಕುಸಿದಿದ್ದು, ವ್ಯಾಪಾರಿಗಳನ್ನೂ ಚಿಂತೆಗೀಡು ಮಾಡಿದೆ. ಈ ಮಾರುಕಟ್ಟೆ ಪ್ರವೇಶಿಸುವ ಈರುಳ್ಳಿ ತುಂಬಿದ ವಾಹನಗಳ ಸಂಖ್ಯೆ ಶೇಕಡ 30ರಷ್ಟು ಕುಸಿದಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶಗಳು ಹೇಳುತ್ತವೆ.
ದೇಶದ ಬಹಳಷ್ಟು ಕಡೆ ಕಳೆದ ಆರು ತಿಂಗಳಿಂದ ಈರುಳ್ಳಿ ಚಿಲ್ಲರೆ ಮಾರಾಟ ಬೆಲೆ 40-50 ರೂಪಾಯಿ ಇದ್ದು, ಬೆಲೆ ಇಳಿಕೆಯ ಸೂಚನೆಗಳು ಕಾಣುತ್ತಿಲ್ಲ. ಸಣ್ಣ ಮಾರುಕಟ್ಟೆಗಳಲ್ಲಿ ಅಲ್ಪಸ್ವಲ್ಪ ಏರಿಳಿತ ಕಂಡುಬಂದಿದ್ದರೂ, ಬಹುತೇಕ ನಗರಗಳಲ್ಲಿ ಕೆ.ಜಿ. ಈರುಳ್ಳಿಯ ದರ 40 ರೂಪಾಯಿ ಆಸುಪಾಸಿನಲ್ಲಿದೆ.
ಈರುಳ್ಳಿ ಉತ್ಪಾದನೆ ಕುಂಠಿತವಾಗಿರುವುದು ಬೆಲೆ ಏರಿಕೆಗೆ ಕಾರಣ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಹಿಂದಿನ ವರ್ಷ 22.4 ದಶಲಕ್ಷ ಟನ್ ಈರುಳ್ಳಿ ಉತ್ಪಾದನೆಯಾಗಿದ್ದರೆ, ಈ ಬಾರಿ ಶೇಕಡ 4.5ರಷ್ಟು ಕುಸಿತ ಕಂಡು ಕೇವಲ 21.4 ದಶಲಕ್ಷ ಟನ್ ಮಾತ್ರ ಉತ್ಪಾದನೆಯಾಗಿದೆ. ಆದರೆ ಮಹಾರಾಷ್ಟ್ರ, ಗುಜರಾತ್ ಹಾಗೂ ಮಧ್ಯಪ್ರದೇಶದಿಂದ ಹೊಸ ಬೆಳೆ ಮಾರುಕಟ್ಟೆಗೆ ಬಂದ ಬಳಿಕ ದರ ಸ್ಥಿರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.