ರಾಜೀವ್ ಗಾಂಧಿ ಜೊತೆ ಪತ್ರಕರ್ತರೊಬ್ಬರ ರಸ್ತೆ ಪಯಣದ ನೆನಪುಗಳು

ದೇಶದ ಪ್ರಧಾನಿ ಕಲ್ಲು ಮಣ್ಣಿನ ರಸ್ತೆಯ ಮೇಲೆ ಸೆಗಣಿ ಹರಡಿರುವ ಹಾದಿಯಲ್ಲಿ ನಡೆದು ತಮ್ಮ ಮನೆಯತ್ತ ನಡೆದು ಬರುತ್ತಿರುವುದನ್ನು ಕಂಡಾಗ ಹಳ್ಳಿಗರ ಮುಖಭಾವದಲ್ಲಿ ಆಶ್ಚರ್ಯ, ಆನಂದ ಕಾಣಿಸುತ್ತಿತ್ತು. ಕೆಲವರು ನಂಬಲಿಕ್ಕಾಗದೆ ನೆರೆಮನೆಯವರನ್ನು ಕೂಗಿ ಕರೆಯುತ್ತಿದ್ದರು. ಕೆಲವರು ಇದು ಕನಸಲ್ಲ, ನಿಜ ಎನ್ನುವುದನ್ನು ಖಾತರಿಪಡಿಸಿಕೊಳ್ಳಲು ರಾಜೀವ್ ಗಾಂಧಿಯವರನ್ನು ಸ್ಪರ್ಶಿಸುತ್ತಿದ್ದರು.
1986ರ ಸೆಪ್ಟಂಬರ್‌ನಲ್ಲಿ, ಪಶ್ಚಿಮ ಬಂಗಾಲದಲ್ಲಿ ಚುನಾವಣೆಗಳು ನಡೆಯುವುದಕ್ಕಿಂತ ಎಂಟು ತಿಂಗಳ ಮೊದಲು, ರಾಜೀವ್ ಒಂದು ವಿಮಾನದ ತುಂಬ ಕೇಂದ್ರ ಸಚಿವರನ್ನು ಹಾಗೂ ಕಾರ್ಯದರ್ಶಿಯವರನ್ನು ತುಂಬಿಕೊಂಡು ಬಂದು ಕೋಲ್ಕತಾದಲ್ಲಿ ಇಳಿದರು. ರಾಜ್ಯಪಾಲರ ನಿವಾಸದಲ್ಲಿ ಜ್ಯೋತಿ ಬಸು ಜೊತೆ ಸರಣಿ ಸಭೆಗಳನ್ನು ನಡೆಸುವುದು ಅವರ ಉದ್ದೇಶವಾಗಿತ್ತು.
ನನ್ನನ್ನು ಮಣಿಶಂಕರ್ ಅಯ್ಯರ್‌ಗೆ ಪರಿಚಯಿಸಿದ ಪ್ರಿಯಾ ದಾರವರ ಕಾರಣದಿಂದಾಗಿ ನನಗೆ ಪ್ರಧಾನಿಯವರ ಹೆಲಿಕಾಪ್ಟರ್‌ನಲ್ಲಿ ಒಂದು ಆಸನ ದೊರಕಿತು. ರಾಜೀವ್ ಗಾಂಧಿಯವರಿಗೆ ಪಶ್ಚಿಮ ಬಂಗಾಲದಲ್ಲಿ ವ್ಯಾಪಕ ಪ್ರಚಾರ ಬೇಕಾಗಿತ್ತು. 24x7 ಗಂಟೆಗಳ ಟಿವಿ ಚಾನೆಲ್‌ಗಳಿಲ್ಲದಿದ್ದ ಆ ಕಾಲದಲ್ಲಿ ಅವರು ಪ್ರಚಾರಕ್ಕಾಗಿ ಪಶ್ಚಿಮ ಬಂಗಾಲದ ಅತ್ಯಧಿಕ ಪ್ರಸಾರದ ‘ಆನಂದ ಬಝಾರ್ ಪತ್ರಿಕೆ’ (ಎಬಿಪಿ)ಯನ್ನು ಆಯ್ದುಕೊಂಡದ್ದು ಸರಿಯಾದ ಕ್ರಮವೇ ಆಗಿತ್ತು.
ನಾನು ಪ್ರಧಾನಿ ಜೊತೆ ಪ್ರಯಾಣಿಸುತ್ತ್ತಾ, ನನ್ನ ಕಣ್ಮುಂದೆ ನಡೆದದ್ದನ್ನೆಲ್ಲ ದಾಖಲಿಸಿಕೊಳ್ಳುತ್ತ ಸಂದರ್ಭದ ಸದುಪಯೋಗ ಮಾಡಿಕೊಂಡೆ. ನನ್ನ ಪಾಲಿಗೆ ಅದು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅನುಭವವಾಗಿತ್ತು.
ರಾಜಭವನದ ಸಭೆಯ ಬಳಿಕ ಮೂರು ದಿನಗಳ ಕಾಲ ರಾಜೀವ್ ರಸ್ತೆ ಪ್ರಯಾಣದ ಮೂಲಕ ಬಂಗಾಲದ ಹತ್ತಾರು ಕಡೆ ಓಡಾಡಿದರು. ಅವರಿಗೆ ಜೋರ್ಡಾನ್‌ನ ದೊರೆ ಉಡುಗೊರೆಯಾಗಿ ನೀಡಿದ್ದ ಜೋಂಗಾ ಕಾರನ್ನು ಸ್ವತಃ ಅವರೇ ಚಲಾಯಿಸಿದರು. ಮುಂದಿನ ಸೀಟಿನಲ್ಲಿ ಒಂದು ಬಾರ್ಬಿ ಗೊಂಬೆಯ ಹಾಗೆ ದುಪಟ್ಟಾ ಧರಿಸಿದ್ದ ಸೋನಿಯಾ ಕುಳಿತು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಂಭ್ರಮಿಸುತ್ತಿದ್ದ ಜನರತ್ತ ಅಗಾಗ ಕೈ ಬೀಸುತ್ತಿದ್ದರು. ಪ್ರಿಯಾ ದಾ ನನ್ನ ಹಿಂದೆ ಓರ್ವ ಕಟ್ಟುಮಸ್ತಾದ ಕಮಾಂಡೊ ಜೊತೆ ಕುಳಿತಿದ್ದರು. ಆ ಕಮಾಂಡೊ 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ರಾಜೀವರನ್ನು ಬಲಿ ತೆಗೆದುಕೊಂಡ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ. ವಾಹನಗಳ ಸಾಲಿನಲ್ಲಿ ಪ್ರಧಾನ ಮಂತ್ರಿಯವರ ಕಾರ್ಯಾಲಯದ ಕೆಲವು ಅಧಿಕಾರಿಗಳೊಂದಿಗೆ ನಾಲ್ಕನೆಯ ಕಾರಿನಲ್ಲಿ ನಾನು ಕುಳಿತಿದ್ದೆ.
ರಾಜೀವ್ ಯಾವಾಗಲೂ ಅಚ್ಚ ಬಿಳುಪಾದ ಉಡುಪನ್ನೇ ಧರಿಸುತ್ತಿದ್ದರು. ಅವರು ರಾಜ್ಯದ ರಸ್ತೆಗಳಲ್ಲಿ ಓರ್ವ ಗ್ರಾಂಡ್ ಪ್ರಿಕ್ಸ್ ಚಾಲಕನ ಹಾಗೆ ನಾಗಾಲೋಟದಲ್ಲಿ ಕಾರು ಡ್ರೈವ್ ಮಾಡುತ್ತಿದ್ದರು. ಪರಿಣಾಮವಾಗಿ ಅವರ ಕಾರಿನ ವೇಗಕ್ಕೆ ಸರಿಗಟ್ಟಲಾಗದ ಬಿಳಿ ಅಂಬಾಸಿಡರ್ ಕಾರುಗಳು ಅವರನ್ನು ಹಿಂಬಾಲಿಸುತ್ತ್ತಾ ತುಂಬಾ ಹಿಂದೆ ಉಳಿದು ಬಿಡುತ್ತಿದ್ದವು.
ಒಮ್ಮೆ ಉತ್ತರ ಬಂಗಾಲ ದಲ್ಲಿ ಎಲ್ಲೋ ಒಂದು ಕಡೆ ಪ್ರಧಾನಿ ಯವರ ಜೋಂಗಾ ಇದ್ದಕ್ಕಿದ್ದಂತೆಯೇ ನಿಂತು ಬಿಟ್ಟಿತು ಆಗಲಿರುವ ಅಪಘಾತ ವೊಂದನ್ನು ತಪ್ಪಿಸಲೋ ಎಂಬಂತೆ. ನಾನು ಕಾರಿನಿಂದ ಇಳಿದು ಅವರ ಕಾರಿನ ಸಮೀಪ ಓಡಿದೆ. ಅಂತಹ ತುರ್ತು ಬ್ರೇಕ್ ಹಾಕುವ ಅಗತ್ಯವೇನೂ ಕಾಣಿಸಲಿಲ್ಲ. ನಾನು ನೋಡಿದ ಮುಂದಿನ ದೃಶ್ಯ: ಅವರ ಕಾರಿನಿಂದ ಓರ್ವ ಹಿರಿಯ ಅಧಿಕಾರಿ ಕೆಳಗಿಳಿದು ರಸ್ತೆ ದಾಟಿ ರಸ್ತೆಯಲ್ಲಿ ಬಿದ್ದಿದ್ದ ಆಹಾರದ ಒಂದು ಖಾಲಿ ಪ್ಯಾಕೆಟನ್ನು ಎತ್ತಿಕೊಂಡರು. ಆ ಮೇಲೆ ತಿಳಿಯಿತು, ಆ ಹಿರಿಯ ಅಧಿಕಾರಿ ತಾನು ತಿಂದ ಉಪಾಹಾರದ ಖಾಲಿ ಪ್ಯಾಕೆಟನ್ನು ತನ್ನ ಕಾರಿನ ಕಿಟಕಿಯ ಮೂಲಕ ರಸ್ತೆಗೆ ಎಸೆಯುವುದನ್ನು ರಾಜೀವ್ ತನ್ನ ರಿಯರ್‌ವ್ಯೆ ಕನ್ನಡಿಯಲ್ಲಿ ನೋಡಿದರು. ಆ ದೃಶ್ಯ ಅವರಿಗೆ ಎಷ್ಟು ಕಿರಿಕಿರಿ ಉಂಟು ಮಾಡಿತೆಂದರೆ ಅವರು ಆ ಹಿರಿಯ ಅಧಿಕಾರಿಗೆ ನಾಗರಿಕ ಪ್ರಜ್ಞೆಯ ಬಗ್ಗೆ ಒಂದು ಸರಿಯಾದ ಪಾಠ ಕಲಿಸಲು ನಿರ್ಧರಿಸಿದ್ದರು.
ಸ್ಥಳೀಯ ಆಡಳಿತಕ್ಕೆ ಯಾವುದೇ ಮುನ್ಸೂಚನೆ ನೀಡದೆ ದಿಢೀರನೆ ಹಳ್ಳಿಗರನ್ನು ಭೇಟಿಯಾಗುವುದು ರಾಜೀವರ ರಸ್ತೆ ಪ್ರಯಾಣದ ಉದ್ದೇಶವಾಗಿತ್ತು. ಹಾಗಾಗಿ ಅವರು ಯಾವಾಗ ಎಲ್ಲಿ ತಮ್ಮ ಕಾರನ್ನು ಪಕ್ಕಕ್ಕೆ ತಿರುಗಿಸಿ ಯಾವ ಹಳ್ಳಿಯನ್ನು ಪ್ರವೇಶಿಸುತ್ತಾರೆ ಎಂದೂ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದ್ದರಿಂದ ನಾನು ತುಂಬ ಎಚ್ಚರದಿಂದ ಇದ್ದು ಅವರು ಇಳಿದಲ್ಲಿಗೆ ಓಡಿ ಹೋಗಿ ಅಲ್ಲಿ ನಡೆಯುತ್ತಿದ್ದ ಎಲ್ಲವನ್ನೂ ದಾಖಲಿಸಿಕೊಳ್ಳಬೇಕಾಗಿತ್ತು.
ದೇಶದ ಪ್ರಧಾನಿ ಕಲ್ಲು ಮಣ್ಣಿನ ರಸ್ತೆಯ ಮೇಲೆ ಸೆಗಣಿ ಹರಡಿರುವ ಹಾದಿಯಲ್ಲಿ ನಡೆದು ತಮ್ಮ ಮನೆಯತ್ತ ನಡೆದು ಬರುತ್ತಿರುವುದನ್ನು ಕಂಡಾಗ ಹಳ್ಳಿಗರ ಮುಖಭಾವದಲ್ಲಿ ಆಶ್ಚರ್ಯ, ಆನಂದ ಕಾಣಿಸುತ್ತಿತ್ತು. ಕೆಲವರು ನಂಬಲಿಕ್ಕಾಗದೆ ನೆರೆಮನೆಯವರನ್ನು ಕೂಗಿ ಕರೆಯುತ್ತಿದ್ದರು. ಕೆಲವರು ಇದು ಕನಸಲ್ಲ, ನಿಜ ಎನ್ನುವುದನ್ನು ಖಾತರಿಪಡಿಸಿಕೊಳ್ಳಲು ರಾಜೀವ್ ಗಾಂಧಿಯವರನ್ನು ಸ್ಪರ್ಶಿಸುತ್ತಿದ್ದರು. ಹಲವು ಹಿಂದೂ ಹಳ್ಳಿಗಳಲ್ಲಿ ಮಹಿಳೆಯರೂ ಶಂಖಗಳನ್ನು ಊದಿ ಆರತಿ ಬೆಳಗುತ್ತಿದ್ದರು.
ಹಳ್ಳಿಗರಿಗೆ ರಾಜೀವ್ ಸರಳ ಹಾಗೂ ನೇರ, ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುತ್ತಿದ್ದರು. ಗ್ರಾಮೀಣ ಬಡವರಿಗಾಗಿ ಇದ್ದ ಹಲವಾರು ಕೇಂದ್ರ ಸರಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ ಎಂದು ತಿಳಿಯಲು ಅವರು ಪ್ರಯತ್ನಿಸುತ್ತಿದ್ದರು. ಎಡ ಪಕ್ಷಗಳಿಗೆ ಸೇರಿದ್ದ ಸ್ಥಳೀಯ ಪಂಚಾಯತ್ ಜನಪ್ರತಿನಿಧಿಗಳು ತಮ್ಮ ಬಗ್ಗೆ ತೋರುತ್ತಿದ್ದ ತಾರತಮ್ಯದ ಧೋರಣೆಯನ್ನು ಹೆಚ್ಚಿನ ಹಳ್ಳಿಗರು ನೇರವಾಗಿಯೇ ಖಂಡಿಸಿ ಮಾತನಾಡುತ್ತಿದ್ದರು. ಸರಕಾರ ನೀಡುವ ಸವಲತ್ತುಗಳು ಮತ್ತು ಅನುದಾನಗಳು ಹೆಚ್ಚಾಗಿ, ಆಳುವವರಿಗೆ ನಿಷ್ಠರಾಗಿರುವವರಿಗೆ ಮಾತ್ರ ಸಿಗುತ್ತವೆಂದು ಅವರು ಹೇಳಿದರು. ಭಾರೀ ಭ್ರಷ್ಟಾಚಾರದ ಬಗ್ಗೆ ಜನರು ದೂರಿದಾಗ ರಾಜೀವ್ ಒಮ್ಮೆಮ್ಮೆ ಕ್ರುದ್ಧರಾಗುತ್ತಿದ್ದರು.
ಆಗೆಲ್ಲ ಸೋನಿಯಾ ಒಂದೇ ಒಂದು ಶಬ್ದ ಮಾತಾಡದೆ ತನ್ನ ಪತಿಯ ಪಕ್ಕದಲ್ಲಿ ನಿಂತಿರುತ್ತಿದ್ದರು.
ಒಂದು ಚಿಕ್ಕ ಹಳ್ಳಿಯಲ್ಲಿ ನವಜಾತ ಆಡಿನ ಮರಿಯೊಂದು ರಾಜೀವರ ಗಮನ ಸೆಳೆಯಿತು. ಅವರು ಅದನ್ನೆತ್ತಿ ತನ್ನ ತೊಡೆಯ ಮೇಲಿಟ್ಟುಕೊಂಡು, ಸೋನಿಯಾರನ್ನು ಬದಿಗೆ ಕರೆದರು. ಇಬ್ಬರೂ ಪ್ರೀತಿಯಿಂದ ಆಡಿನ ಮರಿಯ ಬೆನ್ನು ತಟ್ಟಿದರು. ಅದನ್ನು ಅದರ ಮಾಲಕನಿಗೆ ಹಿಂದೆ ಕೊಡುತ್ತಾ ರಾಜೀವ್ ಹೇಳಿದರು, ‘‘ಅದನ್ನು ಅದರ ತಾಯಿ ಇರುವಲ್ಲಿಗೆ ಕೊಂಡುಹೋಗು. ಅದು ಇವತ್ತಷ್ಟೇ ಹುಟ್ಟಿದ್ದು ಅಂತ ಕಾಣುತ್ತದೆ’’.
ಇನ್ನೊಂದು ಹಳ್ಳಿಯಲ್ಲಿ ರಾಜೀವ್ ದಂಪತಿ ನೇರವಾಗಿ ಮಂದ ಬೆಳಕಿದ್ದ, ಸೊಳ್ಳೆಗಳು ಗುಂಯ್‌ಗುಡುತ್ತಿದ್ದ ಹಸುವಿನ ಒಂದು ಕೊಟ್ಟಿಗೆಯೊಳಗೆ ಹೋದರು. ಅಂತಹ ಒಂದು ದಾಳಿಯಿಂದ ಪ್ರಧಾನಿ ಮತ್ತವರ ಪತ್ನಿಯನ್ನು ಹೇಗೆ ರಕ್ಷಿಸುವುದೆಂದು ತಿಳಿಯದೆ ಭದ್ರತಾ ಸಿಬ್ಬಂದಿ ಗಲಿಬಿಲಿಗೊಂಡರು. ಅಭ್ಯಾಗತರು ಕೆಲವು ಬೀಸಣಿಗೆಗಳನ್ನು ತಂದರು. ನಾನು ಅವುಗಳಲ್ಲೊಂದನ್ನು ತೆಗೆದುಕೊಂಡು ಸೋನಿಯಾರಿಗೆ ನೀಡಿ ಅವರಿಗೆ ಸ್ವಲ್ಪ ಆರಾಮ ಸಿಗುವಂತೆ ನೋಡಿಕೊಂಡೆ. ಇದರಿಂದ ಸ್ವಲ್ಪ ಧೈರ್ಯತಾಳಿ ಅವರ ಆ ಪ್ರವಾಸದ ಅನುಭವ ಬಗ್ಗೆ ಒಂದು ಪ್ರಶ್ನೆ ಕೇಳಿದೆ. ಸೋನಿಯಾ ನನ್ನೆಡೆ ತಿರುಗಿ ಎಂತಹ ನಿಷ್ಠುರ ನೋಟ ಬೀರಿದರೆಂದರೆ ನನ್ನ ವಿಶ್ವಾಸ ಉಡುಗಿಹೋಯಿತು.
ಹದಿನೇಳು ವರ್ಷಗಳ ಬಳಿಕ, 2004ರ ಲೋಕಸಭಾ ಚುನಾವಣೆಯ ಮೊದಲು, ಅವರು ಜನಪತ್ 10ರಲ್ಲಿ ನೀಡಿದ ಒಂದು ಔತಣಕೂಟದಲ್ಲಿ ನಾನವರಿಗೆ ಈ ಅನುಭವವನ್ನು ಹೇಳಿದೆ. ಅತಿಥಿಗಳನ್ನು ಸ್ವಾಗತಿಸುತ್ತಿದ್ದ ಮನಮೋಹನ್ ಸಿಂಗ್‌ರವರಿಗೆ ನಾನು ‘ಆನಂದ ಬಝಾರ್ ಪತ್ರಿಕೆ’ಯ ಪ್ರತಿನಿಧಿ ಎಂದು ತಿಳಿದಾಗ ಅವರು ಹೇಳಿದರು: ‘‘ಅವೀಕ್ ನನಗೆ ಭಾರೀ ಮೊತ್ತದ ವೇತನದೊಂದಿಗೆ ಒಂದು ನೌಕರಿ ನೀಡುವುದಾಗಿ ಹೇಳಿದರು. ನಾನು ಓರ್ವ ನಿವೃತ್ತ ವ್ಯಕ್ತಿಯಾಗಿ ನನಗೆ ಅಷ್ಟೊಂದು ಹಣ ಬೇಕಾಗಿಲ್ಲ ಎಂದೆ’’. ಕೆಲವು ದಿನಗಳ ಬಳಿಕ ಅವರು ಈ ದೇಶದ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆಂದು ಆಗ ಯಾರಿಗೂ ಗೊತ್ತಿರಲಿಲ್ಲ.
ಕೃಪೆ: scroll.in