ಜೆಡಿಎಸ್ ಅಭ್ಯರ್ಥಿ ಗೆದ್ದರೆ ಮೂರೇ ತಿಂಗಳಲ್ಲಿ ಕರಗಡ ಯೋಜನೆ: ಮಾಜಿ ಶಾಸಕ ಧರ್ಮೇಗೌಡ
ಚಿಕ್ಕಮಗಳೂರು, ಮಾ.13: ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾದಿಸಿದರೆ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಕೇವಲ ಮೂರೇ ತಿಂಗಳಿನಲ್ಲಿ ಕರಗಡ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಿ ಬಯಲು ಸೀಮೆಗೆ ನೀರು ಹರಿಸಿಯೇ ತೀರುತ್ತೇನೆ ಎಂದು ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಘೋಷಿಸಿದ್ದಾರೆ.
ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಮಂಗಳವಾರ ನಡೆದ ಬಯಲು ಸೀಮೆ ಭಾಗದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಯಲು ಸೀಮಿಗೆ ನೀರುಣಿಸುವ ಕರಗಡ ಕುಡಿಯುವ ನೀರಿನ ಯೋಜನೆಗೆ ಈ ಹಿಂದೆ ಅಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಮನವೊಲಿಸಿ ಮೂರೂವರೆ ಕೋಟಿ ರೂ. ಅನುದಾನ ಒದಗಿಸುವ ಮೂಲಕ ಕಾಮಗಾರಿಗೆ ಚಾಲನೆ ಕೊಟ್ಟವನು ನಾನು. ಆ ಕಮಿಟ್ಮೆಂಟ್ ಅನ್ನು ನಾನು ಮರೆತಿಲ್ಲ. ಎಷ್ಟೆ ಕಷ್ಟವಾದರೂ, ಯಾವುದೇ ಅಡೆ ತಡೆಗಳು ಬಂದರೂ ಅದನ್ನು ಎದುರಿಸಿ ಶತಾಯಗತಾಯ ಬಯಲು ಸೀಮೆಗೆ ನೀರು ಹರಿಸಿಯೇ ತೀರುತ್ತೇನೆ ಎಂದು ಭರವಸೆ ನೀಡಿದರು.
ಹಣ, ಹೆಂಡದಿಂದ ಈ ಬಾರಿ ಬಿಜ ಪಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ನಮ್ಮ ತಂದೆ ಲಕ್ಷ್ಮಯ್ಯನವರು ಚುನಾವಣೆಗೆ ನಿಂತಿದ್ದ ವೇಳೆ ಜಾತಿ ಇಲ್ಲ, ಹಣ ಇಲ್ಲ ಇವರೆಲ್ಲಿ ಗೆಲ್ಲುತ್ತಾರೆ ಎಂದು ಅಪಹಾಸ್ಯ ಮಾಡಿದ್ದರು. ನಾನು ಚುನಾವಣೆಗೆ ಸ್ಪರ್ದಿಸಿದಾಗಲು ಇವನೆಲ್ಲಿ ಎಂಎಲ್ಎ ಆಗುತ್ತಾನೆ ಎಂದು ಹಾಸ್ಯ ಮಾಡಿದ್ದರು. ಆದರೆ ನಾನು ಮತ್ತು ನನ್ನ ತಂದೆ ಹಣವಿಲ್ಲದೆ ಗೆದ್ದು ಬಂದೆವು. ಅದೇ ರೀತಿ ಹಣ ಹೆಂಡವಿಲ್ಲದೆ ನಮ್ಮ ಅಭ್ಯರ್ಥಿ ಹರೀಶ್ ಈ ಬಾರಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಉಪಾದ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯಲ್ಲಿ ಕ್ಷುಲ್ಲಕ ರಾಜಕಾರಣ ಮತ್ತು ಹಣ ಹೊಡೆಯುವ ಮೂಲಕ ಕಾಂಗ್ರೇಸ್, ಬಿಜೆಪಿ ಶಾಸಕರು ಬಯಲುಸೀಮೆಯ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದ ಅವರು, ಹದಿನೈದು ವರ್ಷಗಳಿಂದ ಬಯಲು ಸೀಮೆಯ ಜನರಿಗೆ ಕುಡಿಯಲು ನೀರು ಒದಗಿಸದ ಶಾಸಕ ಸಿ ಟಿ ರವಿಯವರು ಜೆಡಿಎಸ್ ಅಭ್ಯರ್ಥಿ ಹರೀಶ್ ಅವರು ಟ್ಯಾಂಕರ್ ಗಳಲ್ಲಿ ನೀರು ವಿತರಿಸಲು ಆರಂಬಿಸಿದ ನಂತರ ಎಚ್ಚೆತ್ತು ಇದೀಗ ಅವರೂ ಟ್ಯಾಂಕರ್ ಗಳಿಗೆ ಬಿಜೆಪಿ ಬ್ಯಾನರ್ ಹಾಕಿಕೊಂಡು ನೀರು ವಿತರಿಸಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಶಾಸಕ ಸಿ.ಟಿ ರವಿಯವರಿಗೆ ಇದೀಗ ಯಡಿಯೂರಪ್ಪ ನೆನಪಾಗಿದ್ದಾರೆ. ಅದಕ್ಕಾಗಿ ತಮ್ಮ ರಾಜಕೀಯ ಗುರು ಅನಂತಕುಮಾರ್ ಭಾವಚಿತ್ರವನ್ನು ಬಿಟ್ಟು ಯಡಿಯೂರಪ್ಪನವರ ಭಾವ ಚಿತ್ರವನ್ನು ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹರೀಶ್ ಮಾತನಾಡಿ, ಮೂರು ಬಾರಿ ಬಿಜೆಪಿ ಆಡಳಿತವನ್ನು ನೋಡಿದ್ದೀರಿ. ಇದೊಂದು ಬಾರಿ ಬದಲಾವಣೆ ತನ್ನಿ. ಜೆಡಿಎಸ್ಗೆ ಮತ ನೀಡುವ ಮೂಲಕ ಅಭಿವೃದ್ದಿ ರಾಜಕಾರಣಕ್ಕೆ ನಾಂದಿ ಹಾಡಿ ಎಂದು ಮನವಿ ಮಾಡಿದರು
ಇದೇ ವೇಳೆ ಕಾಂಗೇಸ್ ಮತ್ತು ಬಿಜೆಪಿ ತೊರೆದ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು. ಸಮಾವೇಶಕ್ಕೆ ಮುನ್ನ ಸಹಸ್ರಾರು ಕಾರ್ಯಕರ್ತರೊಂದಿಗೆ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿದ ಮುಖಂಡರು ಮನೆ ಮನೆಗೆ ತೆರಳಿ ಜೆಡಿಎಸ್ ಸರಕಾರದ ಸಾಧನೆಯನ್ನು ವಿವರಿಸಿದರು. ಪಕ್ಷದ ಮುಖಂಡರಾದ ಭೈರೇಗೌಡ, ರಮೇಶ್, ಜಯರಾಜ ಅರಸ್, ಚಂದ್ರೇಗೌಡ, ಮೂರ್ತಿ, ಸದಾನಂದ್, ದಿನೇಶ್, ಕೋಟಿ ವಿನಯ್, ರಾಜಮ್ಮ, ದಾಕ್ಷಾಯಿಣಿ ನಿಸ್ಸಾರ್ ಅಹ್ಮದ್, ದೇವಿಪ್ರಸಾದ್, ಗ್ರಾಪಂ ಅದ್ಯಕ್ಷ ಯೋಗೀದ್ರ, ಉಪಾಧ್ಯಕ್ಷೆ ಇಂದಿರಾಬಾಯಿ ಮತ್ತಿತರರು ಉಪಸ್ಥಿತರಿದ್ದರು.