ಧಾರವಾಡ: ಆಯುಧಗಳನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಆದೇಶ
ಧಾರವಾಡ, ಮಾ.29: ರಾಜ್ಯ ವಿಧಾನಸಭೆ ಚುನಾವಣೆ-2018ರ ನಿಮಿತ್ತ ಚುನಾವಣೆಯು ಶಾಂತಿಯುತವಾಗಿ ಹಾಗೂ ಸುಗಮವಾಗಿ ನಡೆಸುವ ಕುರಿತು ಜಿಲ್ಲೆಯ ಆಯುಧ ಲೈಸನ್ಸ್ದಾರರು ಹೊಂದಿರುವ ಆಯುಧಗಳನ್ನು ಕಡ್ಡಾಯವಾಗಿ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ-2018ರ ಕುರಿತು ಜಿಲ್ಲೆಯಲ್ಲಿ ಚುನಾವಣೆಗಳು ಶಾಂತಿಯುತವಾಗಿ ಮತ್ತು ಸುಗಮವಾಗಿ ಜರುಗಿಸಲು ಹಾಗೂ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಆಯುಧ ಲೈಸನ್ಸ್ದಾರರು ತಾವು ಹೊಂದಿರುವ ಆಯುಧಗಳನ್ನು ಜೊತೆಗೆ ಇಟ್ಟುಕೊಂಡು ತಿರುಗುವುದನ್ನು ಪ್ರತಿಬಂಧಿಸಿದೆ. ಹಾಗೂ ಮಾ.27 ರಿಂದ ಮೇ 18ರವರೆಗೆ ಆಯುಧಗಳನ್ನು ಕಡ್ಡಾಯವಾಗಿ ಈ ಕೂಡಲೇ ಸಮೀಪದ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಲು ಅವರು ಆದೇಶಿಸಿದ್ದಾರೆ.
ಆಯುಧಗಳನ್ನು ಠೇವಣಿ ಮಾಡಿದ ಬಗ್ಗೆ ಅಗತ್ಯವಾದ ಸ್ವೀಕೃತಿ ಪತ್ರ ಪಡೆದುಕೊಳ್ಳಲು ಸೂಚಿಸಿದೆ. ಚುನಾವಣಾ ಫಲಿತಾಂಶವು ಘೋಷಣೆಯಾದ ಒಂದು ವಾರದ ನಂತರ ಸಂಬಂದಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳು ಆಯುಧಗಳನ್ನು ಬಿಡುಗಡೆ ಮಾಡಿ ಲೈಸನ್ಸ್ದಾರರಿಗೆ ಮರಳಿ ನೀಡಲು ತಿಳಿಸಿದ್ದಾರೆ.
ಈ ಆದೇಶವು ಕರ್ತವ್ಯದ ಮೇಲೆ ಇರುವ ಪೊಲೀಸ್ ಅಧಿಕಾರಿಗಳಿಗೆ, ಅವರ ಸಿಬ್ಬಂದಿಗಳಿಗೆ, ಬ್ಯಾಂಕ್ ರಕ್ಷಣಾ ಸಿಬ್ಬಂದಿಗೆ ಮತ್ತು ಸರಕಾರವು ಪೂರೈಸಿದ ಆಯುಧ ಹೊಂದಿರುವ ವಿವಿಧ ಇಲಾಖೆಗಳ ರಕ್ಷಣಾ ಸಿಬ್ಬಂದಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಬಿ.ಬೊಮ್ಮನಹಳ್ಳಿ ಆದೇಶದಲ್ಲಿ ತಿಳಿಸಿದ್ದಾರೆ.