ಉಡುಪಿ : ಜೂ.1ರಿಂದ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

ಸಾಂದರ್ಭಿಕ ಚಿತ್ರ
ಉಡುಪಿ, ಮೇ 22: ಕರ್ನಾಟಕ ಕರಾವಳಿ ಮೀನುಗಾರಿಕೆ(ನಿಯಂತ್ರಣ) ಕಾಯ್ದೆ 1986 ಅನ್ವಯ ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು /ಸಾಧನಗಳನ್ನು ಉಪಯೋಗಿಸಿ ಎಲ್ಲಾ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್ಬೋರ್ಡ್ ಅಥವಾ ಔಟ್ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕಾ ಚಟುವಟಿಕೆಯನ್ನು ಜೂ.1ರಿಂದ ಜು.31ರವರೆಗೆ ಒಟ್ಟು 61ದಿನಗಳ ಕಾಲ ನಿಷೇಧಿಸಿ ಕೇಂದ್ರ ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯವು ಆದೇಶ ಹೊರಡಿಸಿದೆ.
ಈ ಮೀನುಗಾರಿಕೆ ನಿಷೇಧದ ಸರಕಾರದ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು/ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ-1986ರಲ್ಲಿ ವಿಧಿಸಲಾಗುವ ದಂಡನೆಗಳಿಗೆ ಹೊಣೆಯಾಗುವುದಲ್ಲದೇ ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ. ಎಲ್ಲಾ ಮೀನುಗಾರರು ಈ ಆದೇಶವನ್ನು ಪಾಲಿಸಿ ಸರಕಾರದೊಂದಿಗೆ ಸಹಕರಿಸಬೇಕು ಎಂದು ಉಡುಪಿ ಮೀನುಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.