ಮಣಿಪಾಲ: ಎಎಂಐಸಿಯಿಂದ ವಾರ್ಷಿಕ ಸಮ್ಮೇಳನ
ಉಡುಪಿ, ಜೂ.5: ಏಷ್ಯನ್ ಮೀಡಿಯಾ ಇನ್ರ್ಫಾಮೇಷನ್ ಎಂಡ್ ಕಮ್ಯುನಿಕೇಷನ್ (ಎಎಂಐಸಿ)ನ 26ನೇ ವಾರ್ಷಿಕ ಸಮ್ಮೇಳನ ಜೂ.7ರಿಂದ 9ರವರೆಗೆ ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಷನ್ (ಎಸ್ಒಸಿ)ನ ಆಶ್ರಯದಲ್ಲಿ ಮಣಿಪಾಲದ ಫಾರ್ಚ್ಯೂನ್ ಇನ್ ಹೊಟೇಲ್ ವ್ಯಾಲಿವ್ಯೆನಲ್ಲಿ ನಡೆಯಲಿದೆ ಎಂದು ಎಸ್ಒಸಿಯ ನಿರ್ದೇಶಕಿ ಡಾ.ಪದ್ಮಾರಾಣಿ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಷ್ಯದ ಗೊಂದಲದ ಸಹಸ್ರಮಾನ: ಕೆಲವು ಕಲಾತ್ಮಕ ಪ್ರತಿಕ್ರಿಯೆಗಳು’ ವಿಷಯದ ಕುರಿತು ನಡೆಯುವ ಈ ಸಮ್ಮೇಳನದಲ್ಲಿ 16 ದೇಶಗಳ 300ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಸಮ್ಮೇಳನವನ್ನು ಜೂ.7ರ ಬೆಳಗ್ಗೆ 9:30ಕ್ಕೆ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಉದ್ಘಾಟಿಸುವರು. ಎಎಂಐಸಿ ನಿರ್ದೇಶಕ ಮಂಡಳಿ ಯ ಮುಖ್ಯಸ್ಥ ಕ್ರಿಸ್ಪಿನ್ ಸಿ.ಮೆಸ್ಲೋಗ್ ಮುಖ್ಯ ಅತಿಥಿಯಾಗಿದ್ದು, ಹೈದರಾಬಾದ್ ವಿವಿಯ ಪ್ರೊ ವೈಸ್ಚಾನ್ಸಲರ್ ಪ್ರೊ.ಬಿ.ಪಿ.ಸಂಜಯ್ ಪ್ರದಾನ ಭಾಷಣ ಮಾಡಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಎಎಂಐಸಿಯ ಪ್ರಧಾನ ಕಾರ್ಯದರ್ಶಿ ರಾಮೋನ್ ಆರ್. ತುವೋಜೋನ್ ಸಮಾರೋಪ ಭಾಷಣ ಮಾಡಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಹಲವು ವಿಷಯಗಳ ಕುರಿತು ವಿಶೇಷ ಸಂವಾದ ನಡೆಯಲಿದೆ ಎಂದು ಡಾ.ಪದ್ಮಾರಾಣಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಎಂಐಸಿಯ ನಿರ್ದೇಶಕ ಡಾ.ವಿನೋದ್ ಅಗರ್ವಾಲ, ಎಸ್ಒಸಿಯ ಪ್ರೀತಂ ಅಡಿಗ ಹಾಗೂ ತಕ್ಷಕ್ ಪೈ ಉಪಸ್ಥಿತರಿದ್ದರು.