ಮಾದಕ ವ್ಯಸನಕ್ಕೊಳಗಾದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿ: ಡಾ.ಜಗದೀಶ್
ಬೆಂಗಳೂರು, ಜೂ.26: ಮಾದಕ ವ್ಯಸನಕ್ಕೆ ಒಳಗಾಗುವ ಮಕ್ಕಳಿಗೆ ಪೋಷಕರು ಸೂಕ್ತ ಚಿಕಿತ್ಸೆ ಕೊಡಿಸಬೇಕೇ ಹೊರತು ಬೈಯುವುದು ಮತ್ತು ದಂಡಿಸುವುದನ್ನು ಮಾಡಬಾರದು ಎಂದು ಅಭಯ ಹಾಸ್ಪಿಟಲ್ನ ನಿರ್ದೇಶಕ ಡಾ.ಎ.ಜಗದೀಶ್ ಸಲಹೆ ನೀಡಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜು ಮಕ್ಕಳು ಅತಿ ಸಣ್ಣ ವಯಸ್ಸಿನಲ್ಲಿಯೇ ಮಾದಕ ದ್ರವ್ಯಗಳನ್ನು ಸೇವನೆ ಮಾಡುವುದನ್ನು ಕಲಿಯುತ್ತಿದ್ದಾರೆ. ಅದನ್ನು ತಡೆಗಟ್ಟುವ ಸಲುವಾಗಿ ಬಹಳಷ್ಟು ಪೋಷಕರು ಮಕ್ಕಳಿಗೆ ಮಾನಸಿಕ ಹಿಂಸೆ ನೀಡುವುದು ಅಥವಾ ಬೈಯುವುದು, ದಂಡಿಸುವುದನ್ನು ಮಾಡುತ್ತಾರೆ. ಆದರೆ, ಅದು ತಪ್ಪು ಎಂದು ಹೇಳಿದರು.
ಮಾದಕ ದ್ರವ್ಯಗಳಿಗೆ ಮಾರು ಹೋದ ಮಕ್ಕಳೊಂದಿಗೆ ಮುಕ್ತ ಚರ್ಚೆ ನಡೆಸಬೇಕು ಹಾಗೂ ಅವರು ಹೇಳುವುದನ್ನು ಆಲಿಸಬೇಕು. ಅನಂತರ ತಪ್ಪು ದಾರಿಯಲ್ಲಿ ನಡೆಯದಂತೆ ಸೂಕ್ತ ಮಾರ್ಗದರ್ಶನ ನೀಡಬೇಕು. ಆ ಮೂಲಕ ಮಕ್ಕಳನ್ನು ವ್ಯಸನ ಮುಕ್ತ ಮಾಡಲು ಸಾಧ್ಯವಾಗುತ್ತದೆ. ದಂಡಿಸುವುದರಿಂದ ಮತ್ತಷ್ಟು ವ್ಯಸನಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅವರು ತಿಳಿಸಿದರು.
ವ್ಯಸನಿ ಔಷಧಿ ಕೇಂದ್ರದ ಮುಖ್ಯಸ್ಥೆ ಡಾ.ಪ್ರತಿಮಾ ಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯದ ಮಾದಕಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಎಂಟು ವರ್ಷದ ಮಕ್ಕಳಿಂದ ಆರಂಭವಾಗಿ ಯುವತಿಯರವರೆಗೂ ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಎಲ್ಎಸ್ಡಿ, ಕೊಕೇನ್, ಮೆಥಾಂಫಿಟಾಮೈನ್ ಮತ್ತು ಎಂಡಿಎಂಎ ಮುಂತಾದ ಮನೋವೈದ್ಯಕೀಯ ಪದಾರ್ಥಗಳನ್ನು ಹೊರತು ಪಡಿಸಿ ಕ್ಯಾನಾಬಿಸ್(ಗಾಂಜಾ), ಪೈಪ್(ಚಿಲ್ಲಂ) ಸೇರಿದಂತೆ ಕೆಲವು ಅಪಾಯಕಾರಿ ಮಾದಕಗಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದರು.
2017 ರ ವಿಶ್ವಸಂಸ್ಥೆಯ ಡ್ರಗ್ ಮತ್ತು ಅಪರಾಧಗಳ ಕಚೇರಿ ನೀಡಿದ ವರದಿ ಪ್ರಕಾರ, ಜಗತ್ತಿನಲ್ಲಿ ಅಂದಾಜು 29.5 ದಶಲಕ್ಷ ಜನರು ಔಷಧಿಗಳ ಹಾನಿಕಾರಕ ಬಳಕೆಯಲ್ಲಿ ತೊಡಗಿಕೊಂಡಿದ್ದಾರೆ. ಮತ್ತು ಮಾದಕ ದ್ರವ್ಯದ ಬಳಕೆಯಿಂದಾಗುವ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಅಲ್ಲದೆ, ಅಂದಾಜು 12 ದಶಲಕ್ಷ ಜನರಲ್ಲಿ ಡ್ರಗ್ಸ್ ಸೇವನೆಯಿಂದ ಹೆಪಟೈಟಸ್ ಪತ್ತೆಯಾಗಿದೆ ಎಂದು ವರದಿ ಮಾಡಿದೆ ಎಂದು ಅವರು ಹೇಳಿದರು.
ಮಾದಕ ದ್ರವ್ಯಗಳನ್ನು ಸೇವನೆ ಮಾಡುವುದರಿಂದ ಗಾಬರಿ ಪಡುವುದು, ಆತಂಕ, ಭಯ, ನಿದ್ರೆ ಮತ್ತು ಹಸಿವಿನಲ್ಲಿ ಪರಿಣಾಮಕಾರಿಯಾದ ಬದಲಾವಣೆಗಳಾಗಿರುತ್ತವೆ. ಮಾನಸಿಕ ಚಟುವಟಿಕೆ ಕಡಿಮೆಯಾಗುವುದು ಕಂಡು ಬರುತ್ತದೆ. ದೀರ್ಘಾವಧಿ ಪರಿಣಾಮಗಳಾದ ಭ್ರಮೆ, ಭ್ರಾಂತಿ, ಸ್ಮರಣಶಕ್ತಿ ಸಂಬಂಧಿಸಿದ ತೊಂದರೆಗಳು ಎದುರಾಗುತ್ತದೆ. ಧೂಮಪಾನದಿಂದ ಕೆಮ್ಮು, ಕಫ, ಎದೆಯ ದಟ್ಟಣೆ, ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ ಎಂದು ಅವರು ತಿಳಿಸಿದರು.
ಸಮಾಜದಲ್ಲಿ ಮಾದಕ ದ್ರವ್ಯಗಳನ್ನು ಬಳಸುವವರಿಗೆ ಅಗತ್ಯವಾದಷ್ಟು ಹಲವಾರು ಜನರು ವಾಮ ಮಾರ್ಗಗಳಿಂದ ಸರಬರಾಜು ಮಾಡುತ್ತಾರೆ. ಅಂತಹವರನ್ನು ಕಂಡು ಹಿಡಿದು ಸೂಕ್ತ ಶಿಕ್ಷೆ ವಿಧಿಸಬೇಕು. ಅಲ್ಲದೆ, ಮಾದಕ ದ್ರವ್ಯಗಳಿಗೆ ಬಲಿಯಾದವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಪ್ರೀತಿ, ವಿಶ್ವಾಸದಿಂದ ಆರೈಕೆ ಮಾಡಬೇಕು ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಡಾ.ಎಚ್.ಚಂದ್ರಶೇಖರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕ್ರಿಸ್ಪ್ ಸಂಸ್ಥೆಯ ಅಧ್ಯಕ್ಷ ಕುಮಾರ ಜಹಗೀರ್ದಾರ್, ಡಾ.ಮಹೇಶ್ ಆರ್ ಗೌಡ ಉಪಸ್ಥಿತರಿದ್ದರು.