ವೈದ್ಯಕೀಯ ಸೀಟು ಹಂಚಿಕೆ ವಿಚಾರ: ಕೇಂದ್ರ, ರಾಜ್ಯ ಸರಕಾರಗಳಿಗೆ ಹೈಕೋರ್ಟ್ ನೋಟಿಸ್
![ವೈದ್ಯಕೀಯ ಸೀಟು ಹಂಚಿಕೆ ವಿಚಾರ: ಕೇಂದ್ರ, ರಾಜ್ಯ ಸರಕಾರಗಳಿಗೆ ಹೈಕೋರ್ಟ್ ನೋಟಿಸ್ ವೈದ್ಯಕೀಯ ಸೀಟು ಹಂಚಿಕೆ ವಿಚಾರ: ಕೇಂದ್ರ, ರಾಜ್ಯ ಸರಕಾರಗಳಿಗೆ ಹೈಕೋರ್ಟ್ ನೋಟಿಸ್](https://www.varthabharati.in/sites/default/files/images/articles/2018/06/26/139992.jpeg)
ಬೆಂಗಳೂರು, ಜೂ.26: ಸಾಗರೋತ್ತರ ಭಾರತೀಯ ವಿದ್ಯಾರ್ಥಿಗಳಿಗೆ(ಒಐಸಿ) ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಸರಕಾರಿ ಹಾಗೂ ಆಡಳಿತ ಮಂಡಳಿ ಸೀಟು ಪ್ರವೇಶಕ್ಕೆ ನಿರಾಕರಿಸಿರುವ ಕ್ರಮ ಪ್ರಶ್ನಿಸಿ 50ಕ್ಕೂ ಹೆಚ್ಚು ಒಐಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿತು.
ಪ್ರತಿವಾದಿಗಳಾದ ಭಾರತೀಯ ವೈದ್ಯಕೀಯ ಪರಿಷತ್ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ವಿದ್ಯಾರ್ಥಿಗಳು ಬೇರೆ ರಾಜ್ಯಗಳಲ್ಲಿ ಜನಿಸಿದ್ದಾರೆ ಎಂಬ ಕಾರಣವನ್ನಿಟ್ಟುಕೊಂಡು ಸರಕಾರಿ ಹಾಗೂ ಆಡಳಿತ ಮಂಡಳಿಯ ಸೀಟು ಪ್ರವೇಶಕ್ಕೆ ನಿರಾಕರಿಸುತ್ತಿದ್ದಾರೆ. ಆದರೆ, ಈ ಎಲ್ಲ ವಿದ್ಯಾರ್ಥಿಗಳು ಬೇರೆ ರಾಜ್ಯಗಳಲ್ಲಿ ಜನಿಸಿದ್ದರೂ ಬಹಳ ವರ್ಷಗಳಿಂದ ಕರ್ನಾಟಕದಲ್ಲಿಯೆ ವಾಸವಾಗಿದ್ದಾರೆ. ಹೀಗಾಗಿ, ಇವರಿಗೂ ಸರಕಾರಿ ಹಾಗೂ ಆಡಳಿತ ಮಂಡಳಿ ಸೀಟುಗಳ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಸಾಗರೋತ್ತರ ಭಾರತೀಯ ವಿದ್ಯಾರ್ಥಿಗಳು ಕರ್ನಾಟಕದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆರ್ಐ ಕೋಟಾದಡಿಯಲ್ಲಿ ಸೀಟುಗಳನ್ನು ಪಡೆಯಲು ಹೋದರೆ 60, 70, 75 ಲಕ್ಷ ರೂ.ಹಣವನ್ನು ನೀಡಬೇಕಾಗುತ್ತದೆ. ಇದರಿಂದ, ವಿದ್ಯಾರ್ಥಿಗಳ ಪೋಷಕರಿಗೆ ಹೆಚ್ಚಿನ ಆರ್ಥಿಕ ಹೊರೆ ಆುತ್ತದೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೆಟಿಸ್ ಜಾರಿಗೊಳಿಸಿ ಆದೇಶಿಸಿತು.