ಎಂಜಿನಿಯರಿಂಗ್ ಕೋರ್ಸ್ಗಳಿಗೆ ಶುಲ್ಕ ನಿಗದಿ
ಸರಕಾರಿ ಸೀಟಿಗೆ 19,090ರೂ., ಖಾಸಗಿ ಸೀಟಿಗೆ 50ಸಾವಿರ ರೂ.
ಬೆಂಗಳೂರು, ಜೂ.30: ಸರಕಾರಿ ಅನುದಾನಿತ ಹಾಗೂ ಅನುದಾನರಹಿತ ವೃತ್ತಿಪರ ಕಾಲೇಜುಗಳ ಎಂಜಿನಿಯರಿಂಗ್ ಹಾಗೂ ವಾಸ್ತುಶಿಲ್ಪ ಕೋರ್ಸ್ಗಳಿಗೆ ಸರಕಾರ ಶುಲ್ಕವನ್ನು ನಿಗದಿ ಪಡಿಸಿದೆ.
ಸರಕಾರಿ ಕಾಲೇಜು ಮತ್ತು ವಿಶ್ವವಿದ್ಯಾಲಯ ಘಟಕ ಕಾಲೇಜಿನಲ್ಲಿರುವ ಶೇ.100ರಷ್ಟು ಸರಕಾರಿ ಕೋಟಾದ ಸೀಟುಗಳಿಗೆ 19,090ರೂ., ಖಾಸಗಿ ಅನುದಾನಿತ ಕಾಲೇಜಿನಲ್ಲಿರುವ ಶೇ.95 ಸರಕಾರಿ ಕೋಟಾದ ಸೀಟುಗಳಿಗೆ 19,090ರೂ. ಹಾಗೂ ಶೇ.5ರಷ್ಟು ಆಡಳಿತ ಮಂಡಳಿ ಸೀಟಿಗೆ 1.21ಲಕ್ಷ ರೂ. ಅಥವಾ 1.70ಲಕ್ಷ ಶುಲ್ಕ ನಿಗದಿಗೊಳಿಸಿದೆ.
ಖಾಸಗಿ ವಿಶ್ವವಿದ್ಯಾಲಯಗಳು 2006ರ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ(ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಅನ್ವಯ ಶುಲ್ಕ ನಿಗದಿ ಸಮಿತಿ ರಚಿಸಿಕೊಂಡು, 50ಸಾವಿರ ರೂ. ಮಿತಿಗಿಂತ ಹೆಚ್ಚು ಶುಲ್ಕ ನಿಗದಿಗೊಳಿಸಿದ್ದರೆ ಅದನ್ನು 50ಸಾವಿರ ರೂ. ಸೀಮಿತಗೊಳಿಸಬೇಕು. 50ಸಾವಿರ ರೂ.ಕ್ಕಿಂತ ಕಡಿಮೆ ಶುಲ್ಕ ನಿಗದಿ ಮಾಡಿದರೆ, ಅದನ್ನು 45ಸಾವಿರ ರೂ.ಸೀಮಿತಗೊಳಿಸುವಂತೆ ಸರಕಾರ ಸೂಚಿಸಿದೆ.
2018-19ನೆ ಶೈಕ್ಷಣಿಕ ಸಾಲಿಗೆ ರಾಜ್ಯದ ಸರಕಾರಿ ಎಂಜಿನಿಯರಿಂಗ್, ವಿಶ್ವವಿದ್ಯಾಲಯಗಳು, ಖಾಸಗಿ, ಸರಕಾರಿ ಅನುದಾನಿತ ಎಂಜಿನಿಯರಿಂಗ್ ಕಾಲೇಜು ಮತ್ತು ವಾಸ್ತುಶಿಲ್ಪ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಪಾವತಿಸಬೇಕಾದ ಬೋಧನಾ ಶುಲ್ಕ, ವಿಶ್ವವಿದ್ಯಾಲಯದ ಶುಲ್ಕ ಮತ್ತು ಸೀಟು ಹಂಚಿಕೆ ಪ್ರಮಾಣಕ್ಕೆ ಕೆಲವೊಂದು ಷರತ್ತು ವಿಧಿಸಲಾಗಿದೆ.
ಷರತ್ತುಗಳು: ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ನಿಗದಿ ಪಡಿಸಿರುವ ಕೋರ್ಸ್ಗಳ ಒಟ್ಟು ಪ್ರವೇಶ ಮಿತಿಯ ಮೇಲೆ ಶೇ.5ರಷ್ಟು ಸೂಪರ್ ನ್ಯೂಮರರಿ ಕೋಟಾದ ಸೀಟುಗಳನ್ನು ಯಾವುದೆ ಬೋಧನಾ ಶುಲ್ಕವಿಲ್ಲದೆ ಮೆರಿಟ್ ಆಧಾರದಲ್ಲಿ ಹಂಚಬೇಕು. ವಿಶ್ವವಿದ್ಯಾಲಯವು ನಿಗದಿಸುವ ಶುಲ್ಕವನ್ನು ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪಾವತಿಸಬೇಕು.
ಸರಕಾರಿ ಎಂಜಿನಿಯರಿಂಗ್ ಕಾಲೇಜು, ಖಾಸಗಿ ಅನುದಾನಿತ ಮತ್ತು ವಿಶ್ವವಿದ್ಯಾಲಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ವಾರ್ಷಿಕ 15ಸಾವಿರ ರೂ.ಶುಲ್ಕವನ್ನು ವಿಶ್ವವಿದ್ಯಾಲಯ ಶುಲ್ಕವಾಗಿ ಪಾವತಿಸಬೇಕು. ಅಲ್ಪಸಂಖ್ಯಾತವಲ್ಲದ ಶಿಕ್ಷಣ ಸಂಸ್ಥೆಗಳಲ್ಲಿ ಎನ್ಆರ್ಐ ಮತ್ತು ಇತರೆ ಕೋಟಾ ಶೇ.25ರಷ್ಟು ಮೀರಬಾರದು. ಅಲ್ಪಸಂಖ್ಯಾತ ಕಾಲೇಜುಗಳಿಗೆ ಎನ್ಆರ್ಐ ಮತ್ತು ಇತರೆ ಕೋಟಾದ ಮಿತಿ ಶೇ.30ರಷ್ಟು ಮೀರುವಂತಿಲ್ಲವೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.