ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ದಾವಣಗೆರೆ, ಜು.13: ಕಳೆದ ಮೂರು ದಿನಗಳ ಹಿಂದೆ ನಗರದಲ್ಲಿ ನಡೆದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಿದ್ಯಾ ನಗರ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ವಿನಾಯಕ ನಗರದ ನಿವಾಸಿಗಳಾದ ಪಿ.ಅಶೋಕ ಮತ್ತು ಶಿಲ್ಪಾಚಾರಿ ಬಂಧಿತ ಆರೋಪಿಗಳು. ಜು.10ರಂದು ನಗರದ ಮಹೇಂದ್ರ ಸರ್ವೀಸ್ ಸೆಂಟರ್ ಬಳಿ ನಡೆದ ಭರತ್ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈ ಬಂಧನ ನಡೆದಿದೆ.
ಘಟನೆ ವಿವರ: ಜು.10ರಂದು ನಗರದ ಮಹೇಂದ್ರ ಸರ್ವೀಸ್ ಸೆಂಟರ್ ಪಕ್ಕದ ಖಾಲಿ ಜಾಗದಲ್ಲಿ ಮದ್ಯಪಾನ ಮಾಡಲು ಮೂವರು ಸ್ನೇಹಿತರಾದ ಭರತ್, ಅಶೋಕ್ ಮತ್ತು ಶಿಲ್ಪಾಚಾರಿ ಸೇರಿದ್ದರು. ಈ ವೇಳೆ ಭರತ್ ಗೋಲಿ ಆಡಲು ಬರುವುದಿಲ್ಲ ಎಂದು ಕೆಟ್ಟ ಶಬ್ದಗಳಿಂದ ಬೈದಿದ್ದು, ಇದಕ್ಕೆ ಆರೋಪಿಗಳು ಆಕ್ಷೇಪಿಸಿದ್ದರು. ಇದೇ ವಿಚಾರವಾಗಿ ಈ ಮೂವರೊಳಗೆ ಜಗಳ ನಡೆದಿದ್ದು, ಭರತ್ರನ್ನು ಶಿಲ್ಪಾಚಾರಿ ತಳ್ಳಿ ಬೀಳಿಸಿದನೆನ್ನಲಾಗಿದೆ. ಈ ವೇಳೆ ಅಶೋಕ ಅಲ್ಲೇ ಬಿದ್ದಿದ್ದ ಸಿಮೆಂಟ್ ಇಟ್ಟಿಗೆಯನ್ನು ಭರ್ತರ ತಲೆ ಮೇಲೆ 2 ಬಾರಿ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಲ್ಲಿ ವಿದ್ಯಾ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನ್ ಶ್ಲಾಘಿಸಿದ್ದಾರೆ