ಮಾಲೂರು ಎಸೆಸೆಲ್ಸಿ ವಿದ್ಯಾರ್ಥಿನಿಯ ಕೊಲೆ ಪ್ರಕರಣ: ಆರೋಪಿಯ ಬಂಧನ
ಮಾಲೂರು, ಆ.3: ರಾಜ್ಯಾದ್ಯಂತ ಸುದ್ದಿ ಮಾಡಿದ ತಾಲೂಕಿನ ಎಸೆಸೆಲ್ಸಿ ವಿದ್ಯಾರ್ಥಿನಿ ರಕ್ಷಿತಾ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಸೆಪೆಟ್ ಕಟೋಜ್ ತಿಳಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಲೂರು ತಾಲೂಕಿನ ಟೇಕಲ್ ಗ್ರಾಮದ ನಿವಾಸಿ ಟಿ.ಎನ್.ಸುರೇಶ್ ಬಾಬು(29) ಬಂಧಿತ ಆರೋಪಿ ಎಂದು ತಿಳಿಸಿದರು. ಶುಕ್ರವಾರ ಬೆಳಗ್ಗೆ ತಾಲೂಕಿನ ಟೇಕಲ್ ಸಮೀಪ ರೈಲಿನ ಮೂಲಕ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಸುರೇಶ್ ಬಾಬುನನ್ನು ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಎಸ್ಪಿ ಹೇಳಿದರು.
ವಿದ್ಯಾರ್ಥಿನಿಯ ತಂದೆ ರವಿ ನೀಡಿರುವ ದೂರಿನನ್ವಯ ಆರೋಪಿಯ ಬಂಧಿನಕ್ಕೆ ತಂಡಗಳನ್ನು ರಚಿಸಿ ತನಿಖೆಯನ್ನು ಚುರುಕುಗೊಳಿಸಿದ್ದ ಪೊಲೀಸ್ ಇಲಾಖೆ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೃತ ವಿದ್ಯಾರ್ಥಿನಿ ರಕ್ಷಿತಾ ಮನೆಯ ಬಳಿಗೆ ಗಾರೆ ಕೆಲಸ ಮಾಡಲು ಬರುತ್ತಿದ್ದ ಆರೋಪಿ, ಆಕೆ ಇಷ್ಟವಾದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಆಕೆ ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ಸಂದರ್ಭ ದಾರಿಯಲ್ಲಿ ಅಡ್ಡಗಟ್ಟಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗಿದ್ದು, ಆದರೆ ಇದಕ್ಕೆ ಆಕೆ ಒಪ್ಪದ ಕಾರಣ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದರು.
ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಸೆಪೆಟ್ ಕಟೋಜ್ ಇದೇ ವೇಳೆ ಹೇಳಿದರು.