ಮಲ್ಪೆ; ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸಿಗನ ಮೇಲೆ ಹಲ್ಲೆ: ದೂರು
ಉಡುಪಿ, ಆ.6: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಪ್ರಚಾರ ನಡೆಸಿದ್ದ ಬಡಾನಿಡಿಯೂರಿನ ಸುನೀಲ್ ಡಿಸೋಜ(32) ಎಂಬವರಿಗೆ ಬಿಜೆಪಿ ಕಾರ್ಯಕರ್ತರು ಆ.5 ರಂದು ಮಧ್ಯರಾತ್ರಿ ವೇಳೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಸುನೀಲ್ ಡಿಸೋಜ ಅಜ್ಜರ ಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ದೃಶ್ಯಗಳು ಸುನೀಲ್ ಡಿಸೋಜರ ಮನೆಯ ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ದಾಖಲಾಗಿವೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
"ಬಡಾನಿಡಿಯೂರು ಗ್ರಾಪಂ ಅಧ್ಯಕ್ಷ ಉಮೇಶ್ ಪೂಜಾರಿ ರಾತ್ರಿ ಕಾರಿನಲ್ಲಿ ನಾಲ್ಕೈದು ಮಂದಿಯನ್ನು ಕರೆದುಕೊಂಡು ಬಂದು ನಮ್ಮ ಮನೆಯ ಮುಂದೆ ಬಿಟ್ಟು ಹೋದರು. ಇವರು ಮನೆಯ ಆವರಣದೊಳಗೆ ಅಕ್ರಮವಾಗಿ ನುಗ್ಗಿ ಹೊರಗಡೆ ಎಳೆದು ತಂದು ಪೈಪಿನಲ್ಲಿ ಕಾಲು, ಬೆನ್ನಿಗೆ ಹಲ್ಲೆ ನಡೆಸಿದ್ದಾರೆ. ಕಾಲಿನಿಂದ ತುಳಿದಿದ್ದಾರೆ. ಅಲ್ಲದೆ ಕೊಲೆ ಬೆದರಿಕೆಯೊಡ್ಡಿದ್ದಾರೆ" ಎಂದು ಸುನೀಲ್ ಡಿಸೋಜ ಆರೋಪಿಸಿದ್ದಾರೆ.
"ಕಳೆದ ಚುನಾವಣೆಯಲ್ಲಿ ನಾನು ಪ್ರಮೋದ್ ಮಧ್ವರಾಜ್ ಪರವಾಗಿ ಕೆಲಸ ಮಾಡಿದ್ದೇನೆ. ಅದನ್ನು ಸಹಿಸದ ಬಿಜೆಪಿಯವರು ಈ ಹಲ್ಲೆ ನಡೆಸಿದ್ದಾರೆ. ಇವರು ಪ್ರತಿದಿನ ಕುಡಿದು ನನಗೆ ಹಲವು ಸಮಯಗಳಿಂದ ತೊಂದರೆ ಕೊಡುತ್ತಿದ್ದಾರೆ. ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಲಿಡ್ವಿನ್ ಡಿಸೋಜ ಮಾತ್ರ ಇರುವುದು. ನಾನು ಈ ಹಿಂದೆ ಹಲವು ಬಾರಿ ಮಲ್ಪೆ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಕರಣ ದಾಖಲಿಸಿಲ್ಲ. ನನಗೆ ಮತ್ತು ನನ್ನ ತಾಯಿಗೆ ರಕ್ಷಣೆ ಇಲ್ಲವಾಗಿದೆ" ಎಂದು ಅವರು ದೂರಿದರು.