ಶಿವಮೊಗ್ಗ ಮ್ಯಾನ್ಹೋಲ್ ದುರಂತ: ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರಕ್ಕೆ ಸಿಐಟಿಯು ಒತ್ತಾಯ
ತುಮಕೂರು,ಆ.08: ಶಿವಮೊಗ್ಗದಲ್ಲಿ ನಿರ್ಮಾಣದ ಹಂತದ ಮ್ಯಾನ್ಹೋಲ್ಗೆ ಇಳಿದು ಉಸಿರುಗಟ್ಟಿ ಸಾವನ್ನಪ್ಪಿದ ಇಬ್ಬರು ಕಾರ್ಮಿಕರ ಕುಟುಂಬಗಳಿಗೆ ತಲಾ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಅವಲಂಬಿತ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಇಂದು ಪೌರಕಾರ್ಮಿಕರು ನಗರದ ಟೌನ್ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಟೌನ್ಹಾಲ್ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ಸಮಾವೇಶಗೊಂಡಿದ್ದ ನೂರಾರು ಪೌರಕಾರ್ಮಿಕರು, ಮೃತ ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಸಾವಿಗೆ ಕಾರಣರಾದ ಗುತ್ತಿಗೆದಾರ ಮತ್ತು ಇಂಜಿನಿಯರ್ ಭರಿಸಬೇಕೆಂದು ಆಗ್ರಹಿಸಿದರು.
ಮ್ಯಾನ್ಹೋಲ್ಗೆ ಕಾರ್ಮಿಕರನ್ನು ಇಳಿಸುವ ಮೊದಲು ಗುತ್ತಿಗೆದಾರರು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್ಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಕಾರ್ಮಿಕರು ಮ್ಯಾನ್ಹೋಲ್ಗೆ ಇಳಿದಾಗ ಮೇಲ್ವಿಚಾರಕರೂ ಕೂಡ ಅಲ್ಲಿ ಇಲ್ಲದೇ ಇರುವುದನ್ನು ಖಂಡಿಸುತ್ತೇವೆ ಎಂದು ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘ ಹೇಳಿದೆ.
ಕಾರ್ಮಿಕರನ್ನು ಮ್ಯಾನ್ಹೋಲ್ಗಳಿಗೆ ಇಳಿಸಬಾರದು ಎಂಬ ನಿಯಮ ಇದೆ. ಆದರೂ ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆದಾರರು ಮತ್ತು ಇಂಜಿನಿಯರ್ಗಳು ಕಾರ್ಮಿಕರನ್ನು ಮ್ಯಾನ್ಹೋಲ್ಗಳಿಗೆ ಇಳಿಸುತ್ತಿದ್ದಾರೆ. ಇಂತಹ ಘಟನೆಗಳು ರಾಜ್ಯದಲ್ಲಿ ಪದೇ ಪದೇ ನಡೆಯುತ್ತಿದ್ದರೂ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಾರ್ಮಿಕರು ಮ್ಯಾನ್ಹೋಲ್ನಲ್ಲಿ ಇಳಿಯಲು ಗುತ್ತಿಗೆದಾರರು ಮತ್ತು ಇಂಜಿನಿಯರ್ಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಕಾನೂನು ಗಾಳಿಗೆ ತೂರಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ರಾಜ್ಯ ಸರಕಾರ ಕ್ರಮ ವಹಿಸಬೇಕು ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಲಕ್ಷ್ಮಣ್, ಪೌರಕಾರ್ಮಿಕರ ಸಂಘದ ನಗರಾಧ್ಯಕ್ಷ ಬಿ.ಜಿ.ರಾಮಕೃಷ್ಣಪ್ಪ ಮಾತನಾಡಿದರು. ಮುಖಂಡರಾದ ನಾಗರಾಜು, ಹನುಮಂತರಾಜು, ರಾಜು, ಜಯಲಕ್ಷ್ಮಿ, ಶಾಂತಮ್ಮ, ಅಂಜನಮೂರ್ತಿ, ಶಿವಣ್ಣ, ರಂಗಯ್ಯ, ರಾಮು, ಸಿದ್ದರಾಜು, ನಾಗೇಶ್ ಮೊದಲಾದವರಿದ್ದರು.