ಪದೇ ಪದೇ ಮೂತ್ರ ವಿಸರ್ಜನೆಯ ಏಳು ಸಾಮಾನ್ಯ ಕಾರಣಗಳು
ನೀವು ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜಿಸುತ್ತೀರಿ? ಹೆಚ್ಚಿನ ಜನರು ದಿನದಲ್ಲಿ ಸುಮಾರು ಎಂಟು ಬಾರಿ ಮತ್ತು ರಾತ್ರಿಯಲ್ಲಿ ಹೆಚ್ಚೆಂದರೆ ಒಂದು ಬಾರಿ ಮೂತ್ರ ವಿಸರ್ಜಿಸುತ್ತಾರೆ. ಇದಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜಿಸುತ್ತಿದ್ದರೆ ಅದು ಕಳವಳದ ಸಂಕೇತವಾಗಬಹುದು. ಪದೇ ಪದೇ ಮೂತ್ರ ವಿಸರ್ಜನೆಯು ಅನಾರೋಗ್ಯದ ಲಕ್ಷಣವಾಗಿರಬಹುದು,ಹೀಗಾಗಿ ಇದನ್ನು ಕಡೆಗಣಿಸುವಂತಿಲ್ಲ. ಆದರೆ ಗರ್ಭಿಣಿಯರಲ್ಲಿ ಪದೇ ಪದೇ ಮೂತ್ರ ವಿಸರ್ಜನೆಯು ಸಾಮಾನ್ಯವಾಗಿದೆ ಮತ್ತು ಅದಕ್ಕೆ ಸೋಂಕು ಕಾರಣವಲ್ಲದಿದ್ದರೆ ಅದೊಂದು ಆರೋಗ್ಯ ಸಮಸ್ಯೆಯಲ್ಲ. ಅಲ್ಲದೆ ನೀವು ದ್ರವಪದಾರ್ಥಗಳು/ಕೆಫೀನ್ಯುಕ್ತ ಪಾನೀಯಗಳನ್ನು ಅತಿಯಾಗಿ ಸೇವಿಸಿದ್ದರೆ ಅಥವಾ ಮೂತ್ರವರ್ಧಕಗಳಂತಹ ಔಷಧಿಗಳನ್ನು ಸೇವಿಸುತ್ತಿದ್ದರೂ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತದೆ.
ಪದೇ ಪದೇ ಮೂತ್ರ ವಿಸರ್ಜನೆಗೆ ಕೆಲವು ಸಾಮಾನ್ಯ ಕಾರಣಗಳು ಮತ್ತು ಅದನ್ನು ಏಕೆ ಕಡೆಗಣಿಸಬಾರದು ಎನ್ನುವುದು ಇಲ್ಲಿದೆ.......
►ಅನಿಯಂತ್ರಿತ ಮಧುಮೇಹ
ಪದೇ ಪದೇ ಮೂತ್ರ ವಿಸರ್ಜನೆ ಮತ್ತು ಮೂತ್ರದ ಪ್ರಮಾಣ ಅತಿಯಾಗಿದ್ದರೆ ಅದು ಟೈಪ್ 2 ಮತ್ತು ಟೈಪ್ 2 ಮಧುಮೇಹದ ಮುನ್ನೆಚ್ಚರಿಕೆಯಾಗುತ್ತದೆ. ರಕ್ತದಲ್ಲಿಯ ಹೆಚ್ಚಿನ ಗ್ಲುಕೋಸ್ನ್ನು ಹೊರಗೆ ಹಾಕಲು ಶರೀರವು ಪ್ರಯತ್ನಿಸುತ್ತದೆ ಮತ್ತು ಅದನ್ನು ಮೂತ್ರದ ಮೂಲಕ ಹೊರಕ್ಕೆ ಹಾಕುವಂತೆ ಮೂತ್ರಪಿಂಡಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ರಕ್ತದಲ್ಲಿ ಹೆಚ್ಚಿನ ಗ್ಲುಕೋಸ್ ಹೊಂದಿರುವವರು ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದಕ್ಕೆ ಇದು ಕಾರಣವಾಗಿದೆ.
►ಇಂಟರ್ಸ್ಟಿಷಿಯಲ್ ಸಿಸ್ಟಿಟಿಸ್(ಐಸಿ)
ಇದನ್ನು ಸಾಮಾನ್ಯವಾಗಿ ಮೂತ್ರಕೋಶದ ಉರಿಯೂತ ಎನ್ನಲಾಗುತ್ತದೆ. ಇದೊಂದು ದೀರ್ಘಕಾಲೀನ ಸಮಸ್ಯೆಯಾಗಿದ್ದರೂ ಸೂಕ್ತ ಚಿಕಿತ್ಸೆಯಿಂದ ನಿಯಂತ್ರಿಸಬಹುದು. ಇದು ಮಹಿಳೆಯರಲ್ಲಿ ಸಾಮಾನ್ಯವಾಗಿದ್ದು,ಮೂತ್ರಕೋಶ ತುಂಬಿದಾಗ ತೀವ್ರ ನೋವಿನ ಅನುಭವವಾಗುತ್ತದೆ. ರಾತ್ರಿ ವೇಳೆ ಮೂತ್ರ ವಿಸರ್ಜನೆಯ ತುಡಿತ,ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆಂಬ ಅವಸರ ಇವು ಐಸಿಯ ಸಾಮಾನ್ಯ ಲಕ್ಷಣಗಳಾಗಿವೆ. *ಮೂತ್ರನಾಳದ ಸೋಂಕು(ಯುಟಿಐ)
ಇದು ಪದೇ ಪದೇ ಮೂತ್ರ ವಿಸರ್ಜನೆಗೆ ಅತ್ಯಂತ ಸಾಮಾನ್ಯ ಕಾರಣಗಳಲ್ಲೊಂದಾಗಿದೆ. ಮಹಿಳೆಯರಲ್ಲಿ ಮೂತ್ರ ವಿಸರ್ಜನಾ ನಾಳವು ಚಿಕ್ಕದಾಗಿರುವುದರಿಂದ ಮೂತ್ರನಾಳದಲ್ಲಿ ಸೋಂಕನ್ನುಂಟು ಮಾಡಲು ಬ್ಯಾಕ್ಟೀರಿಯಾಗಳು ಕಡಿಮೆ ಅಂತರವನ್ನು ಕ್ರಮಿಸಿದರೆ ಸಾಕಾಗುತ್ತದೆ. ಹೀಗಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದು ಹೆಚ್ಚು. ಕೆಲವು ಪ್ರಕರಣಗಳಲ್ಲಿ ಇದು ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ಇನ್ನು ಕೆಲವು ಪ್ರಕರಣಗಳಲ್ಲಿ ಮೂತ್ರವಿಸರ್ಜನೆಯ ಸಂದರ್ಭದಲ್ಲಿ ನೋವು,ಉರಿ,ತುರಿಕೆ ಮತ್ತು ಮೂತ್ರಕೋಶವನ್ನು ಖಾಲಿ ಮಾಡುವಲ್ಲಿ ಅಸಾಮರ್ಥ್ಯದಂತಹ ಲಕ್ಷಣಗಳು ಕಂಡು ಬರುತ್ತವೆ.
►ಮೂತ್ರಪಿಂಡ ಕಾಯಿಲೆ
ವಿಶೇಷವಾಗಿ ರಾತ್ರಿಯ ವೇಳೆ ಪದೇ ಪದೇ ಮೂತ್ರ ವಿಸರ್ಜಿಸುವ ತುಡಿತವುಂಟಾಗುತ್ತಿದ್ದರೆ ಅದು ಮೂತ್ರಪಿಂಡ ಕಾಯಿಲೆಯ ಲಕ್ಷಣವಾಗಬಹುದು. ಮೂತ್ರಪಿಂಡಗಳಲ್ಲಿ ಸೋಂಕು ಉಂಟಾದರೆ ಅವುಗಳಿಗೆ ಹಾನಿಯುಂಟಾಗುತ್ತದೆ ಮತ್ತು ಸೋಸುವಿಕೆ ಪ್ರಕ್ರಿಯೆಗೆ ವ್ಯತ್ಯಯವುಂಟಾಗುತ್ತದೆ ಮತ್ತು ಇದು ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ಹೀಗಾಗಿ ಸರಿಯಾದ ಕಾರಣವನ್ನು ತಿಳಿದುಕೊಳ್ಳಲು ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಮೂತ್ರಪಿಂಡ ಕಾಯಿಲೆಗೆ ಮೂತ್ರನಾಳದಲ್ಲಿನ ಸೋಂಕು ಅಥವಾ ಪುರುಷರಲ್ಲಿ ಪ್ರಾಸ್ಟೇಟ್ ಹಿಗ್ಗುವಿಕೆ ಕಾರಣವಾಗಬಹುದು.
►ಪ್ರಾಸ್ಟೇಟ್ ಸಮಸ್ಯೆಗಳು
ಪ್ರಾಸ್ಟೇಟ್ ಗ್ರಂಥಿಯು ದೊಡ್ಡದಾಗುವುದು ಪದೇ ಪದೇ ಮೂತ್ರ ವಿಸರ್ಜನೆಯನ್ನುಂಟು ಮಾಡಬಹುದು. ಇದು ಪುರುಷರಲ್ಲಿ,ವಿಶೇಷವಾಗಿ ವಯಸ್ಸಾದವರಲ್ಲಿ ಈ ಸಮಸ್ಯೆಗೆ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಕೆಲವು ಪ್ರಕರಣಗಳಲ್ಲಿ ಪ್ರಾಸ್ಟೇಟ್ ಗ್ರಂಥಿಯ ಸೋಂಕು ಅಥವಾ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಪದೇ ಪದೇ ಮೂತ್ರ ವಿಸರ್ಜನೆಯಾಗುವಂತೆ ಮಾಡುತ್ತದೆ. 50 ವರ್ಷಕ್ಕೂ ಹೆಚ್ಚಿನ ಪ್ರಾಯದ ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿ ದೊಡ್ಡದಾಗುವುದು ಸಾಮಾನ್ಯವಾಗಿದೆ. ಹಿಗ್ಗಿದ ಪ್ರಾಸ್ಟೇಟ್ ಗ್ರಂಥಿಯು ಮೂತ್ರಕೋಶದ ಮೇಲೆ ಒತ್ತಡವನ್ನುಂಟು ಮಾಡಿ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತದೆ. ಇದರ ಜೊತೆಗೆ ರಾತ್ರಿವೇಳೆಗಳಲ್ಲಿ ಮೂತ್ರ ವಿಸರ್ಜನೆಗೆ ಎದ್ದುಹೋಗುವ ಅವಸರವನ್ನುಂಟು ಮಾಡುವ ಜೊತೆಗೆ ಪ್ರತಿ ಬಾರಿಯೂ ಮೂತ್ರಕೋಶವು ತುಂಬಿರುವ ಅನುಭವವನ್ನುಂಟು ಮಾಡುತ್ತದೆ.
►ಓವರ್ ಆ್ಯಕ್ಟಿವ್ ಬ್ಲಾಡರ್(ಒಎಬಿ)
ಒಎಟಿ ಅಥವಾ ಮೂತ್ರಕೋಶದ ಅತಿಯಾದ ಚಟುವಟಿಕೆಯು ಪದೇ ಪದೇ ಮೂತ್ರ ವಿಸರ್ಜನೆಗೆ ಇನ್ನೊಂದು ಸಾಮಾನ್ಯ ಕಾರಣವಾಗಿದೆ. ಈ ಸ್ಥಿತಿಯಲ್ಲಿ ಮೂತ್ರಕೋಶವು ದಿಢೀರ್ನೆ ಸಂಕುಚಿತಗೊಳ್ಳುತ್ತದೆ ಮತ್ತು ಇದರಿಂದಾಗಿ ಮೂತ್ರ ವಿಸರ್ಜನೆ ಮಾಡಬೇಕೆಂಬ ತುಡಿತವುಂಟಾಗುತ್ತದೆ. ಅದು ನಿಯಂತ್ರಣವಿಲ್ಲದ ಮೂತ್ರ ಸೋರಿಕೆಗೂ ಕಾರಣವಾಗಬಹುದು. ಇದಕ್ಕೆ ನಿಖರವಾದ ಕಾರಣ ತಿಳಿದಿಲ್ಲವಾದರೂ ಸಮಸ್ಯೆಯನ್ನು ತಗ್ಗಿಸಲು ಕೆಲವು ಚಿಕಿತ್ಸೆಗಳು ಲಭ್ಯವಿವೆ.
►ಮೂತ್ರಕೋಶದ ಕ್ಯಾನ್ಸರ್
ಮೂತ್ರಕೋಶದ ಕ್ಯಾನ್ಸರ್ ಕೂಡ ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ಮೂತ್ರಕೋಶದ ಅಂಗಾಂಶಗಳಲ್ಲಿ ಕ್ಯಾನ್ಸರ್ ಬೆಳವಣಿಗೆಯು ಪದೇ ಪದೇ ಮೂತ್ರ ವಿಸರ್ಜನೆಯ ಅವಸರವನ್ನುಂಟು ಮಾಡುತ್ತದೆ. ಇದರ ಜೊತೆಗೆ ಮೂತ್ರದಲ್ಲಿ ರಕ್ತ ಹೋಗುವುದು ಮತ್ತು ಕಿಬ್ಬೊಟ್ಟೆಯಲ್ಲಿ ನೋವು ಕೂಡ ಕಾಣಿಸಿಕೊಳ್ಳಬಹುದು. ಈ ಲಕ್ಷಣಗಳು ಕಂಡುಬಂದರೆ ಕಡೆಗಣಿಸದೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು.