ಅತೀವೃಷ್ಟಿಯಿಂದ 88 ಕೋಟಿ ರೂ. ನಷ್ಟ: ಚಿಕ್ಕಮಗಳೂರು ಡಿಸಿ ಶ್ರೀರಂಗಯ್ಯ
"ಆ.19 ರಂದು ಮಳೆಹಾನಿ ಪ್ರದೇಶಕ್ಕೆ ಸಿಎಂ"
ಚಿಕ್ಕಮಗಳೂರು, ಆ.18: ಮಲೆನಾಡು ಭಾಗದಲ್ಲಿ ಮಳೆಹಾನಿ ಪರಿಶೀಲಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರವಿವಾರ ಜಿಲ್ಲೆಗೆ ಭೇಟಿ ನೀಡಲಿದ್ದು, ಮೈಸೂರಿನಲ್ಲಿ ಮಳೆಹಾನಿ ಸಮೀಕ್ಷೆ ನಡೆಸಿದ ಬಳಿಕ ಮದ್ಯಾಹ್ನದ ವೇಳೆಗೆ ಅವರು ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಆಗಮಿಸಲಿದ್ದಾರೆಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದ್ದಾರೆ.
ಹವಾಮಾನ ಉತ್ತಮವಾಗಿದ್ದರೆ ಶೃಂಗೇರಿ ಭಾಗದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಇದೇ ವೇಳೆ ಮಳೆಹಾನಿ ಸಂಬಂಧ ಅವರು ವಿವಿಧ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಳೆಹಾನಿ ವಿವರ ಪಡೆಯಲಿದ್ದಾರೆ. ಜಿಲ್ಲಾದ್ಯಂತ ಸುರಿದ ಭಾರೀ ಮಳೆಗೆ ಇದುವರೆಗೂ 88.11 ಕೋಟಿ ರೂ. ನಷ್ಟ ಉಂಟಾಗಿದೆ. ನಷ್ಟದ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಸಂಪೂರ್ಣ ಹಾನಿ ಪ್ರಮಾಣ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಳೆ ನಿಂತ ನಂತರ ಖಚಿತ ಮಾಹಿತಿ ತಿಳಿಯಲು ಸಾಧ್ಯವೆಂದರು.
ಮಳೆಯೊಂದಿಗೆ ಬಾರೀ ಪ್ರಮಾಣದಲ್ಲಿ ಗಾಳಿಬೀಸಿದ್ದರಿಂದ ಮರಗಳು ಉರುಳಿ ವಿದ್ಯುತ್ ಕಂಬಗಳು ಧರೆಗುರುಳಿ ಹಲವು ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತಗತಿಯಲ್ಲಿ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ನೀಡಲು ಶ್ರಮಿಸುತ್ತಿದೆ. ಮೆಸ್ಕಾಂ ಅಧಿಕಾರಿಗಳೂ ಹೋಗಲು ಸಾಧ್ಯವಾಗದಿರುವಂತಹ ಗ್ರಾಮೀಣ ಪ್ರದೇಶದಲ್ಲಿ 8ರಿಂದ10 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮಳೆ ಕಡಿಮೆಯಾದ ನಂತರ ತ್ವರಿತಗತಿಯಲ್ಲಿ ಸರಿಪಡಿಸಲಾಗುವುದು ಎಂದರು.