ಮೈಸೂರು: ವ್ಯಕ್ತಿಯ ಅಪಹರಣ ಪ್ರಕರಣ; ಐವರ ಬಂಧನ
ಮೈಸೂರು,ಆ.23: ಹೆಚ್.ಡಿ.ಕೋಟೆ ತಾಲೂಕಿನ ವ್ಯಕ್ತಿಯೋರ್ವರನ್ನು ಹಣಕ್ಕಾಗಿ ಅಪಹರಿಸಿದ್ದ ಐವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಬಂಧಿತರನ್ನು ಮೈಸೂರಿನ ವಿಶ್ವ, ಚಿತ್ರದುರ್ಗದ ಚಂದ್ರಮೌಳಿ, ಹಾಸನದ ಲಕ್ಷ್ಮಣ, ಬೆಂಗಳೂರಿನ ಕಿಶೋರ್ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೆ ಆರು ಮಂದಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹೊಮ್ಮರಗಳ್ಳಿಯ ಲೋಕೇಶ್ ಎಂಬವರನ್ನು ಅಪಹರಣ ಮಾಡಿದ ಆರೋಪಿಗಳು 50 ಲಕ್ಷರೂ.ಗಳಿಗೆ ಬೇಡಿಕೆಯಿರಿಸಿದ್ದರು. ಅಪಹರಣವಾಗಿ ಮೂರು ದಿನ ಕಳೆದರೂ ಪೊಲೀಸರಿಗೆ ಮಾಹಿತಿ ಲಭಿಸಿರಲಿಲ್ಲ. ಬಳಿಕ ದೊರಕಿದ ಮಾಹಿತಿಯನ್ವಯ ಖುದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆಗಳಿದಾಗ, ಆರೋಪಿಗಳು ಲೋಕೇಶ್ ರನ್ನು ಮೇಲುಕೋಟೆ ಬಳಿ ಬಿಟ್ಟು ಪರಾರಿಯಾಗಿದ್ದರು. ನಂತರ ಪೊಲೀಸರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದರು. ಆರೋಪಿಗಳು ಅಷ್ಟರಲ್ಲಾಗಲೇ ಕುಟುಂಬದವರಿಂದ ಹತ್ತು ಲಕ್ಷರೂ. ವಸೂಲಿ ಮಾಡಿದ್ದು, 6 ಲಕ್ಷರೂ.ವನ್ನು ಕುಟುಂಬದವರಿಂದ ಪಡೆದು 4.5 ಲಕ್ಷ ರೂ.ವನ್ನು ಖಾತೆಗೆ ವರ್ಗಾಯಿಸಿಕೊಂಡಿದ್ದರು ಎನ್ನಲಾಗಿದೆ.
ಪೊಲೀಸರು ವಿಶೇಷ ತನಿಖಾತಂಡವನ್ನು ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದಲ್ಲಿ ಡಿವೈಎಸ್ಪಿ ಭಾಸ್ಕರ್ ರೈ, ಸಿಪಿಐ ಹರೀಶ್, ಪಿಎಸ್ ಐ ಅಶೋಕ್ ಇದ್ದರು ಎನ್ನಲಾಗಿದೆ.