ಚಿಕ್ಕಮಗಳೂರು: ಅ.2ರಿಂದ ನ.19ರ ವರೆಗೆ ವನ್ಯಜೀವಿ ಸಪ್ತಾಹ, ಆನೆ ದಿನಾಚರಣೆ
ಚಿಕ್ಕಮಗಳೂರು, ಅ.1: ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಅರಣ್ಯ ಹಾಗೂ ವನ್ಯಜೀವಿಗಳು ಮತ್ತು ಅವುಗಳ ಸಂರಕ್ಷಣೆ ಸಂಬಂಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಅ.2ರಿಂದ ನ.19ರವರೆಗೆ ವನ್ಯಜೀವಿ ಸಪ್ತಾಹ ಹಾಗೂ ಆನೆ ದಿನಾಚರಣೆಯನ್ನು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವನ್ಯಜೀವಿ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳ್ನನು ಹಮ್ಮಿಕೊಳ್ಳಲಾಗಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಶಾಲಾ ಮಕ್ಕಳಿಗೆ ರಜೆ ಇರುವ ಕಾರಣ ಅ.2ರಂದು ಸಾಂಕೇತಿಕವಾಗಿ ಮತ್ತೋಡಿ ಅಭಯಾರಣ್ಯದಲ್ಲಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭದ್ರಾ ಹುಲಿ ಯೋಜನೆಯ ವನ್ಯ ಜೀವಿ, ಅರಣ್ಯ ಸಂರಕ್ಷಣಾಧಿಕಾರಿ ಎಸ್.ಧನಂಜಯ್ ತಿಳಿಸಿದ್ದಾರೆ.
ಸೋಮವಾರ ನಗರದ ಅರಣ್ಯಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಮಾಹಿತಿ ನೀಡಿದ ಅವರು, ವನ್ಯಜೀವಿ ಸಪ್ತಾಹದ ಅಂಗವಾಗಿ ಅ.2ರಂದು ಬೆಳಗ್ಗೆ 11ಕ್ಕೆ ಮತ್ತೋಡಿ ಅಭಯಾರಣ್ಯದಲ್ಲಿ ನಡೆಯಲಿರುವ ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪಿ.ಎನ್.ದೇಸಾಯಿ ಉದ್ಘಾಟಿಸಲಿದ್ದಾರೆಂದು ಅವರು ತಿಳಿಸಿದರು.
ಅಕ್ಟೊಬರ್ 2 ರಂದು ಮತ್ತೋಡಿಯಲ್ಲಿ ಉದ್ಘಾಟನಾ ಸಮಾರಂಭದ ಬಳಿಕ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಕೃತಿ ಶಿಬಿರ ನಡೆಯಲಿದೆ. ನವೆಂಬರ್ 3 ರಂದು ಬೆಳಗ್ಗೆ 9ಕ್ಕೆ ಮುತ್ತೋಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಕೃತಿ ಶಿಬಿರ ಮತ್ತು ವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 7ರಂದು ಭದ್ರಾ ಹುಲಿ ಯೋಜನೆ ವತಿಯಿಂದ ಚಿಕ್ಕಮಗಳೂರು ಅರಣ್ಯ ಇಲಾಖೆ ಕಚೇರಿಯಲ್ಲಿ ವನ್ಯಜೀವಿಗಳ ಛಾಯಾಚಿತ್ರ ಸ್ಪರ್ಧೆ ನಡೆಯಲಿದೆ. ನ.12ರಂದು ಬೆಳಗ್ಗೆ 10 ರಿಂದ 1ರವರೆಗೆ ನಗರದ ಸ್ಕೌಟ್ಸ್ ಭವನದಲ್ಲಿ ಪರಿಸರ ಗೀತೆಗಳ ಹಾಗೂ ಮಧ್ಯಾಹ್ನ 2:30 ರಿಂದ 5ರವರೆಗೆ ಸ್ಕೌಟ್ಸ್ ಭವನದಲ್ಲಿ ಕಿರುನಾಟಕ, ನೃತ್ಯ ಸ್ಪರ್ಧೆ ನಡೆಯಲಿದೆ. ನವೆಂಬರ್ 13 ರಂದು ಸ್ಕೌಟ್ಸ್ ಭವನದಲ್ಲಿ ಬೆಳಗ್ಗೆ ಪರಿಸರ ಕವಿ ಗೋಷ್ಠಿ ಹಾಗೂ ಮಧ್ಯಾಹ್ನ ಚರ್ಚಾ ಸ್ಪರ್ಧೆಗಳು ನಡೆಯಲಿವೆ ಎಂದರು.
ನವೆಂಬರ್ 14 ರಂದು ಬೆಳಗ್ಗೆ ನಗರದ ಆಫೀಸರ್ ಕ್ಲಬ್ನಲ್ಲಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ಮಧ್ಯಾಹ್ನ ಸ್ಕೌಟ್ಸ್ ಭವನದಲ್ಲಿ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ. ನವೆಂಬರ್ 17 ರಂದು ಬೆಳಗ್ಗೆ 7ರಿಂದ 4ರವರೆಗೆ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೈಕಲ್ ಜಾಥಾ ಹಾಗೂ ಸಂಜೆ 4ಕ್ಕೆ ಹುಲಿ ವೇಷ ಸ್ಪರ್ಧೆ ನಡೆಯಲಿದೆ. ನ.19 ರಂದು ಮಧ್ಯಾಹ್ನ 1.30 ರಿಂದ ಕುವೆಂಪು ಕಲಾಮಂದಿರದಲ್ಲಿ ಕ್ಲೇ ಮಾಡಲಿಂಗ್ ಕಾರ್ಯಕ್ರಮದ ಬಳಿಕ ತಾಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರದವೆರೆಗೆ ವನ್ಯಜೀವಿ ಸಂರಕ್ಷಣೆ ನಡಿಗೆ ಹಾಗೂ ಸಂಜೆ 4 ರಿಂದ 6ರವರೆಗೆ ಸಮಾರೋಪ ಸಮಾರಂಭವು ನಡೆಯಲಿದೆ ಧನಂಜಯ್ ತಿಳಿಸಿದ್ದಾರೆ.
ಜಿಲ್ಲೆಯ ಅರಣ್ಯ, ಅಭಯಾರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಅರಣ್ಯ ಇಲಾಖೆ ಈ ಕಾರ್ಯಕ್ರಮಗಳಲ್ಲದೇ ಚಿಣ್ಣರ ವನದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳ ಮೂಲಕ ಶಾಲಾಮಕ್ಕಳು ಮತ್ತು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಅರಣ್ಯ ಹಾಗೂ ವನ್ಯಜೀವಿಗಳ ಭೇಟೆ, ಕಳ್ಳಸಾಗಣೆ ಜಾಲ ಕಾರ್ಯನಿರ್ವಹಿಸುತ್ತಿರುವುದು ಈಗಾಗಲೇ ಬೆಳಕಿಗೆ ಬಂದಿದ್ದು, ಇದಕ್ಕೆ ಕಡಿವಾಣ ಹಾಕಲು ಇಲಾಖೆ ಅಗತ್ಯ ಕ್ರಮವಹಿಸಿದೆ. ಗೂಬೆ, ಚಿಪ್ಪುಹಂದಿ, ಉಡ, ಆಮೆ ಮತ್ತಿತರ ವನ್ಯಜೀವಿಗಳಿಂದ ಆಶ್ವರ್ಯ, ಅಂತಸ್ತು ಹೆಚ್ಚುತ್ತದೆ ಎಂಬ ಮೂಢನಂಬಿಕೆಯಿಂದಾಗಿ ಇಂತಹ ಅಪರೂಪದ ಪ್ರಾಣಿ, ಪಕ್ಷಿಗಳನ್ನು ಭೇಟೆಯಾಡಿ ಕಳ್ಳಸಾಗಣೆ ಮಾಡಲಾಗುತ್ತಿದೆ. ಸದ್ಯ ಇದಕ್ಕೆ ಕಡಿವಾಣ ಹಾಕಲಾಗಿದೆ.
- ಎಸ್.ಧನಂಜಯ್, ವನ್ಯಜೀವಿ ಸಂರಕ್ಷಣಾಧಿಕಾರಿ, ಭದ್ರಾಹುಲಿ ಯೋಜನೆ