ಚಿಕ್ಕಮಗಳೂರು ಜಿಲ್ಲಾ ಸಹಕಾರಿ ಬ್ಯಾಂಕ್ಗೆ ಉತ್ತಮ ಡಿಸಿಸಿ ಬ್ಯಾಂಕ್ ಪ್ರಶಸ್ತಿ: ಪರಿಷತ್ ಸದಸ್ಯ ಧರ್ಮೇಗೌಡ
ಚಿಕ್ಕಮಗಳೂರು, ಅ.1: ಸಹಕಾರಿ ಸಂಘಗಳಿಗೆ ಸಂಬಂಧಿಸಿದಂತೆ ಇಪ್ಪತ್ತು ಅಂಶಗಳ ಮಾರ್ಗಸೂಚಿಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿರುವ ಹಿನ್ನೆಲೆಯಲ್ಲಿ ಅಪೆಕ್ಸ್ ಬ್ಯಾಂಕ್ವತಿಯಿಂದ ನೀಡಲಾಗುವ 2016-17ನೇ ಸಾಲಿನ "ಎ" ವರ್ಗಗಳ ಬ್ಯಾಂಕ್ಗಳ ಪೈಕಿ "ಉತ್ತಮ ಡಿಸಿಸಿ ಬ್ಯಾಂಕ್" ಎಂದು ಗುರುತಿಸಿ 2ನೇ ಬಹುಮಾನದೊಂದಿಗೆ 2 ಲಕ್ಷ ರೂ. ನಗದು ಪುರಸ್ಕಾರ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಿಗೆ ಡಿಸಿಸಿ ಬ್ಯಾಂಕ್ ಉತ್ತಮ ಸೇವೆ ನೀಡುತ್ತಿದೆ. ಸಹಕಾರಿ ತತ್ವಗಳಡಿಯಲ್ಲಿ ಸ್ಥಾಪನೆಯಾಗಿರುವ ಬ್ಯಾಂಕ್ ಈ ತತ್ವಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಅಪೆಕ್ಸ್ ಬ್ಯಾಂಕ್ ಬ್ಯಾಂಕ್ಅನ್ನು ಗುರುತಿಸಿ ಪುರಸ್ಕಾರ ನೀಡಿದೆ ಎಂದ ಅವರು, ಇದಕ್ಕೆ ಬ್ಯಾಂಕ್ನ ಸದಸ್ಯರು, ನಿರ್ದೇಶಕರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದ ಪ್ರಾಮಾಣಿಕರ ಶ್ರಮ ಕಾರಣ ಎಂದರು.
ರಾಜ್ಯ ಸರಕಾರ ರೈತರ ಸಾಲಮನ್ನಾ ಮಾಡಿದ್ದು, ಈ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 420 ಕೋ. ರೂ. ರೈತರ ಸಾಲ ಮನ್ನಾ ಆಗಿದೆ ಎಂದ ಅವರು, ಈ ಪೈಕಿ ಡಿಸಿಸಿ ಬ್ಯಾಂಕಿಗೆ ರಾಜ್ಯ ಸರಕಾರ ಈಗಾಗಲೇ 168 ಕೋ. ರೂ. ಬಿಡುಗಡೆ ಮಾಡಿದೆ. ಉಳಿದ ಹಣವನ್ನು ಕಾಲಮಿತಿಯೊಳಗೆ ಬಿಡುಗಡೆ ಮಾಡಲಿದೆ ಎಂದರು.
ಡಿಸಿಸಿ ಬ್ಯಾಂಕ್ ವತಿಯಿಂದ ಕಳಸ, ಬುಕ್ಕಂಬುದಿ, ಪಂಚೇನಹಳ್ಳಿಯಲ್ಲಿ ಈಗಾಗಲೇ ಡಿಸಿಸಿ ಬ್ಯಾಂಕ್ನ ನೂತನ ಶಾಖೆಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ತರೀಕೆರೆ, ದೇವನೂರು, ಎಗಟಿ, ಕಡೂರು ಸೇರಿದಂತೆ 10 ನೂತನ ಶಾಖೆಗಳನ್ನು ಆರಂಭಿಸಲಾಗುವುದು ಎಂದ ಅವರು, ಇದರಿಂದ ಜಿಲ್ಲೆಯಲ್ಲಿದ್ದ ಡಿಸಿಸಿ ಬ್ಯಾಂಕ್ ಶಾಖೆಗಳ ಸಂಖ್ಯೆ 19ರಿಂದ 29ಕ್ಕೇರಿದೆ ಎಂದರು.
ನಬಾರ್ಡ್ ಬ್ಯಾಂಕ್ ನೀಡುವ ಶೇ.30ರಷ್ಟು ಬಡ್ಡಿ ಕಡಿತ ಮಧ್ಯವಾರ್ಷಿಕ ಸಾಲವನ್ನು ರೈತರು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡಬೇಕು. ಸರಿಯಾದ ಸಮಯಕ್ಕೆ ರೈತರು ಸಾಲಮರು ಪಾವತಿ ಮಾಡುವುದರಿಂದ ಬ್ಯಾಂಕ್ಗಳ ಏಳಿಗೆಗೆ ಸಹಕಾರಿಯಾಗಲಿದೆ. ಆದ್ದರಿಂದ ಸರಿಯಾದ ಸಮಯಕ್ಕೆ ಸಾಲಮರುಪಾವತಿ ಮಾಡುವಂತೆ ಧರ್ಮೇಗೌಡ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ, ನಿರ್ದೇಶಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.