ಲೋಕಸಭಾ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ: ಸಚಿವ ಎನ್.ಮಹೇಶ್
ಸಚಿವ ಎನ್.ಮಹೇಶ್
ಬೆಂಗಳೂರು, ಅ.4: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಎಸ್ ಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದರು.
ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ನಾನು ಸಚಿವನಾಗಿದ್ದೇನೆ. ಸಂಪುಟದಿಂದ ಹೊರಗೆ ಬರುವಂತೆ ಬಿಎಸ್ಪಿ ವರಿಷ್ಠೆ ಮಾಯಾವತಿ ನನಗೆ ಯಾವುದೇ ಸೂಚನೆ ನೀಡಿಲ್ಲ. ಅವರು ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಅವರು ಹೇಳಿದರು.
ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆಯಾಗಿರುವ ಮಾಯಾವತಿ ನೀಡುವ ಸೂಚನೆಯನ್ನು ಪಾಲನೆ ಮಾಡುವುದಷ್ಟೇ ನನ್ನ ಕೆಲಸ. ಜೆಡಿಎಸ್ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ನಮ್ಮ ಹಳ್ಳಿಗಳಲ್ಲಿ ಪಾರ್ಥೇನಿಯಂ ಗಿಡಕ್ಕೆ ಕಾಂಗ್ರೆಸ್ ಗಿಡ ಅಂತಾರೆ. ಆ ಗಿಡ ಕಿತ್ತು ಹಾಕಿ ಸ್ವಚ್ಚತೆಗೆ ಚಾಲನೆ ಕೊಟ್ಟಿದ್ದೇನೆ ಎಂದು ಹೇಳಿದ್ದೇನೆ ಅಷ್ಟೇ. ಈ ಮಾತನ್ನು ಹೇಳುವಾಗ ಕಾಂಗ್ರೆಸ್ ಪಕ್ಷ ನನ್ನ ಮೆದುಳಲ್ಲಿ ಇರಲಿಲ್ಲ ಎಂದು ಅವರು ಹೇಳಿದರು.