ಅನ್ವರ್ ಹತ್ಯೆ ಆರೋಪಿಗಳ ಬಂಧನಕ್ಕೆ ನಿರ್ಲಕ್ಷ್ಯ: ಬಿಜೆಪಿ ಆರೋಪ
ಅ.10ಕ್ಕೆ ಪೊಲೀಸ್ ಇಲಾಖೆ ವಿರುದ್ಧ ಧರಣಿ
ಚಿಕ್ಕಮಗಳೂರು, ಅ.5: ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅನ್ವರ್ ಅವರ ಹತ್ಯೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಪಕ್ಷದ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಹಮ್ಮದ್ ಅನ್ವರ್ ಅವರ ಹತ್ಯೆಯಾಗಿ ಇಂದಿಗೆ 106 ದಿನಗಳು ಕಳೆದಿದೆ. ಆದರೆ ಹತ್ಯೆಕೋರರ ಬಗ್ಗೆ ಸಣ್ಣ ಸುಳಿವನ್ನೂ ಪೊಲೀಸರು ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿದ ಅವರು, ಹತ್ಯೇಕೋರರನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿ ಅ.10ರಂದು ನಗರದ ತಾಲೂಕು ಕಚೇರಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವರೆಗೂ ಕಾಲ್ನಡಿಗೆ ಮೂಲಕ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಪಕ್ಷದ ಕಾರ್ಯಕರ್ತನ ಹತ್ಯೆಯಾಗಿ 106 ದಿನಗಳು ಕಳೆದರೂ ಕೂಡ ಹತ್ಯೆಕೋರರನ್ನು ಬಂಧಿಸಲು ರಾಜ್ಯ ಸರಕಾರ ಮುಂದಾಗದಿರುವುದನ್ನು ನೋಡಿದರೆ ಸರಕಾರವೇ ಹತ್ಯೆಕೋರರನ್ನು ರಕ್ಷಿಸಲು ಮುಂದಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದ ಅವರು, ಹತ್ಯೆಕೋರರನ್ನು ಶೀಘ್ರವೇ ಬಂಧಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ವತಿಯಿಂದ ಜಿಲ್ಲಾ ವ್ಯಾಪ್ತಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪೆಟ್ರೋಲ್, ಡಿಸೇಲ್ ಬೆಲೆಯನ್ನು ಕೇಂದ್ರ ಸರಕಾರ ಪ್ರತೀ ಲೀಟರ್ಗೆ 2.50 ರೂ. ಇಳಿಕೆ ಮಾಡಿದೆ. ಅದೇ ರೀತಿ ರಾಜ್ಯ ಸರಕಾರ ವಿಧಿಸುವ ಸೆಸ್ ಅನ್ನು ಕಡಿಮೆ ಮಾಡುವಂತೆ ಮನವಿ ಮಾಡಿದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಈಗಾಗಲೇ ಸೆಸ್ ಕಡಿತಗೊಳಿಸಿದ್ದರಿಂದ ಪ್ರತೀ ಲೀಟರ್ ಮೇಲೆ 5 ರೂ. ಕಡಿಮೆಯಾಗಿದೆ. ಅದೇ ರೀತಿ ರಾಜ್ಯ ಸರಕಾರವೂ ಸೆಸ್ ಕಡಿಮೆಗೊಳಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಮ್ಮಯ್ಯ, ಬಿಜೆಪಿ ನಗರಾಧ್ಯಕ್ಷ ಕೋಟೆ ರಂಗನಾಥ್, ಮುಖಂಡ ಬಿ ರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.