ಒಳಮೊಗ್ರು: ಒಂದೇ ದಿನದಲ್ಲಿ ಶೌಚಾಲಯ ನಿರ್ಮಾಣ
ವಿಶ್ವ ಶೌಚಾಲಯ ದಿನಾಚರಣೆ

ಮಂಗಳೂರು, ನ. 20: ಕಳೆದ ಸುಮಾರು ಏಳು ದಶಕಗಳಿಂದ ಸರಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿರುವ ಹಕ್ಕುಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಮತದಾನದ ಹಕ್ಕು ಈ ಎಲ್ಲ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಪರಿಶಿಷ್ಟ ಜಾತಿಯ ಜಾನಕಿ ಶೆಡ್ ಮನೆಗೆ ಟ್ವಿನ್ಪಿಟ್ ಮಾದರಿ ಶೌಚಾಲಯವನ್ನು ಒಂದೇ ದಿನದಲ್ಲಿ ನಿರ್ಮಿಸುವ ಮೂಲಕ ವಿಶ್ವ ಶೌಚಾಲಯ ದಿನವನ್ನು ಅರ್ಥಪೂರ್ಣವಾಗಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಪಂನಲ್ಲಿ ಆಚರಿಸಲಾಯಿತು.
ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ವಿಶ್ವ ಶೌಚಾಲಯ ದಿನವನ್ನು ಶೌಚಾಲಯ ನಿರ್ಮಾಣ, ಜಾಗೃತಿ ಜಾಥಾ, ಶಾಲೆಗಳಲ್ಲಿ ಸ್ವಚ್ಛತಾ ಅರಿವು ಕಾರ್ಯಕ್ರಮಕ್ಕೆ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಎಲ್ಲ ಸೌಲಭ್ಯಗಳಿಂದ ವಂಚಿತರಾಗಿರುವ ಪರಿಶಿಷ್ಟ ಜಾತಿಯ ಕುಟುಂಬಕ್ಕೆ ಸ್ಥಳೀಯ ದಾನಿಗಳ ನೆರವಿನಿಂದ ಮಾದರಿ ಶೌಚಾಲಯ ನಿರ್ಮಿಸಿದ ಒಳಮೊಗ್ರು ಗ್ರಾಮ ಪಂಚಾಯತ್ ಮತ್ತು ಸಂಘ ಸಂಸ್ಥೆಗಳ ಸ್ವಚ್ಛತಾ ಸೇವೆಯನ್ನು ಶ್ಲಾಘಿಸಿದರು.
ಜಿಲ್ಲೆಯಲ್ಲಿರುವ ಶೌಚಾಲಯ ರಹಿತ ಇಂತಹ ಎಲ್ಲ ಕುಟುಂಬಗಳನ್ನು ಗುರುತಿಸಿ ಶೌಚಾಲಯಗಳನ್ನು ನಿರ್ಮಿಸಿ ಪ್ರತಿಯೊಂದು ಮನೆಯಲ್ಲಿಯೂ ಶೌಚಾಲಯ ಇರುವುದನ್ನು ಖಾತರಿಪಡಿಸಿ ಜಿಲ್ಲೆಯನ್ನು ನಿಜಾರ್ಥದಲ್ಲಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಸಂಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿ, ಸೌಲಭ್ಯ ವಂಚಿತ ಗುಡಿಸಲು ವಾಸಿ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿ ಡಿಸೆಂಬರ್ನೊಳಗೆ ಬಯಲು ಬಹಿರ್ದಸೆ ಮುಕ್ತ ಸಂಪೂರ್ಣ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಪಣ ತೊಟ್ಟಿರುವ ಗಾಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಸಂಘ ಸಂಸ್ಥೆ ಗಳ ಕಾರ್ಯವು ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು. ‘ಗ್ರಾಮದ ಜನರ ಹಾಗೂ ದಾನಿಗಳ ಬೆಂಬಲದಿಂದ ಅತೀ ಶೀಘ್ರವಾಗಿ ಒಳಮೊಗ್ರು ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಎಂದು ಘೋಷಿಸಲಾಗುವುದು’ ಎಂದು ಪಂಚಾಯತ್ ಅಧ್ಯಕ್ಷ ಯತಿರಾಜ್ ರೈ ತಿಳಿಸಿದರು.
ಕುಂಬ್ರ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ, ಸ್ವಚ್ಛ ಭಾರತ ಅಭಿಯಾನದ ಆಶಯ ಪರಿಕಲ್ಪನೆಯಂತೆ ಒಳಮೊಗ್ರು ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಸ್ವಚ್ಛ ಗ್ರಾಮವನ್ನಾಗಿಸಲು ಗ್ರಾಮ ಪಂಚಾಯತ್ನೊಂದಿಗೆ ಸಂಘ ಸಂಸ್ಥೆಗಳು, ದಾನಿಗಳು ಪಾಲುದಾರರಾಗಿ ದುಡಿಯಲು ಮುಂದಾಗಿದ್ದಾರೆ ಎಂದರು.
ಕೈಕಾರ, ಕುಂಬ್ರ ಶಾಲೆಗಳಲ್ಲಿ ಚಲನಚಿತ್ರ ಪ್ರದರ್ಶನದ ಮೂಲಕ ಸ್ವಚ್ಛ ಗ್ರಾಮ ನಿರ್ಮಾಣದಲ್ಲಿ ಶಾಲೆ ಮತ್ತು ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಮಾಹಿತಿಯೊಂದಿಗೆ ಪ್ರೇರಣೆ ನೀಡಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುನಂದ ಸದಸ್ಯರಾದ ಮಹೇಶ್ ರೈ ಕೇರಿ, ಶಶಿಕಿರಣ ರೈ, ವಸಂತಿ ಶೆಟ್ಟಿ, ತ್ರಿವೇಣಿ, ಉಷಾ ನಾರಾಯಣ, ಪಿಡಿಒ ಗೀತ, ಕಾರ್ಯದರ್ಶಿ ದಾಮೋದರ್, ಸ್ಥಳೀಯ ಮುಖಂಡರಾದ ಬಾಲಕೃಷ್ಣ ರೈ, ಅಂಗನವಾಡಿ ಕಾರ್ಯಕರ್ತೆ ವೀಣಾ, ಶಾಲಾ ಶಿಕ್ಷಕರು, ಸಮುದಾಯದ ಜನರು, ಶಾಲಾ ವಿದ್ಯಾರ್ಥಿಗಳು ಅರ್ಥಪೂರ್ಣ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.