ಕರ್ತಾರ್ಪುರ ಯಾತ್ರೆಗೆ ಪಾಕ್ ಗಡಿವರೆಗೆ ಕಾರಿಡಾರ್
ಅರುಣ್ ಜೇಟ್ಲಿ
ಹೊಸದಿಲ್ಲಿ, ನ. 23: ಪಾಕಿಸ್ತಾನದ ಹೊಸ ಸರ್ಕಾರ ಭಾರತದ ಜತೆ ಶಾಂತಿ ಮಾತುಕತೆ ಪುನರಾರಂಭಿಸಲು ವಿಫಲವಾದ ಎರಡು ತಿಂಗಳ ಬಳಿಕ, ಉಭಯ ದೇಶಗಳು ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಒಪ್ಪಿಗೆ ಸೂಚಿಸುವ ಮೂಲಕ ಮಹತ್ವದ ಪ್ರಗತಿ ಸಾಧಿಸಲು ಸಜ್ಜಾಗಿವೆ.
ಗಡಿವರೆಗೆ ತನ್ನ ಭಾಗದ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಭಾರತದ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.
ಕೇಂದ್ರ ಸಚಿವ ಸಂಪುಟ ಈ ರಸ್ತೆ ಅಭಿವೃದ್ಧಿ ಯೋಜನೆಗೆ ಒಪ್ಪಿಗೆ ನೀಡುವ ಮೂಲಕ, ಗುರುನಾನಕ್ ಅವರ ಸಮಾಧಿ ಸ್ಥಳವಾದ ಗಡಿಯಾಚೆಗಿನ ಕರ್ತಾರ್ಪುರಕ್ಕೆ ಪ್ರವಾಸಿಗಳು ತೆರಳಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಭಕ್ತರ ಸುಗಮ ಸಂಚಾರಕ್ಕಾಗಿ ಪಾಕಿಸ್ತಾನ ಸರ್ಕಾರ ತನ್ನ ಬದಿಯ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆಯೂ ಭಾರತ ಒತ್ತಾಯಿಸಿದೆ.
ಭಾರತದ ಬದಿಯ ಕಾಮಗಾರಿ ಗುರುದಾಸ್ಪುರ ಜಿಲ್ಲೆಯ ದೇರಾ ಬಾಬಾ ನಾನಕ್ನಿಂದ ಪಾಕಿಸ್ತಾನ ಜತೆಗಿನ ಅಂತರರಾಷ್ಟ್ರೀಯ ಗಡಿವರೆಗೆ ಇರುತ್ತದೆ. ಗುರುದ್ವಾರಾ ದರ್ಬಾರ್ ಸಾಹಿಬ್ ಕರ್ತಾರ್ಪುರ, ಗಡಿಯಾಚೆಗೆ ರಾವಿ ನದಿ ದಂಡೆಯಲ್ಲಿದೆ. ಭಾರತದ ಈ ನಿರ್ಧಾರಕ್ಕೆ ಟ್ವೀಟ್ ಮೂಲಕ ಸ್ಪಂದಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಶಿ, "ಗುರುನಾನಕ್ ಅವರ 550ನೇ ಜಯಂತಿ ಸಂದರ್ಭದಲ್ಲಿ ಅಂದರೆ 2019ರಲ್ಲಿ ಕಾರಿಡಾರ್ ಉದ್ಘಾಟಿಸುವ ತನ್ನ ನಿರ್ಧಾರವನ್ನು ಪಾಕಿಸ್ತಾನ ಈಗಾಗಲೇ ಪ್ರಕಟಿಸಿದೆ. ಕರ್ತಾರ್ಪುರದಲ್ಲಿ ಭಕ್ತರಿಗೆ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಪ್ರಧಾನಿ ಇಮ್ರಾನ್ ಖಾನ್ ನವೆಂಬರ್ 28ರಂದು ಶಿಲಾನ್ಯಾಸ ನೆರವೇರಿಸುವರು ಎಂದು ಪ್ರಕಟಿಸಿದ್ದಾರೆ.
ಕಾರಿಡಾರ್ ನಿರ್ಮಿಸುವ ಭಾರತದ ನಿರ್ಧಾರವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಕಟಿಸಿದ್ದು, ಗುರುನಾನಕ್ ಜಯಂತಿ ಪೂರ್ವದಲ್ಲೇ ಈ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಪಾಕಿಸ್ತಾನದ ಕಡೆಯಿಂದ ನಿರ್ಮಾಣವಾಗಬೇಕಿರುವ 2.5 ಕಿಲೋಮೀಟರ್ ಉದ್ದದ ಕಾರಿಡಾರ್ ನಿರ್ಮಾಣಕ್ಕೆ ಪಾಕಿಸ್ತಾನ ಸಿದ್ಧವಿದ್ದು, ಪ್ರಧಾನಿ ಇಮ್ರಾನ್ ಖಾನ್ ಅವರೇ ಸ್ವತಃ ಮುಂದಿನ ವಾರ ಈ ಕಾಮಗಾರಿಕೆ ಚಾಲನೆ ನೀಡುವರು ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದ್ದವು. ಹಲವು ವಾರಗಳ ಸಮಾಲೋಚನೆ ಬಳಿಕ ಭಾರತ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.