ಅಮೆರಿಕನ್ ಪ್ರವಾಸಿಯ ಹತ್ಯೆ: ದ್ವೀಪದಲ್ಲಿರುವ ಸೆಂಟಿನೆಲಿಗಳು ಯಾರು ಗೊತ್ತಾ ?
ಅಂಡಮಾನ್ ಬಗ್ಗೆ ಸರಕಾರದ ವಿವಾದಾತ್ಮಕ ಆದೇಶವೀಗ ಚರ್ಚೆಯಲ್ಲಿ
ಕೋಲ್ಕತಾ,ನ.23: ‘‘ನೌಕಾಪಡೆ ಮತ್ತು ತಟರಕ್ಷಣಾ ಪಡೆಯ ಕಣ್ಣಿಗೆ ಬೀಳದಂತೆ ದೇವರೇ ನನ್ನನ್ನು ಕಾಪಾಡಿದ್ದ’’ ಇದು ಅಂಡಮಾನ್-ನಿಕೋಬಾರ್ ದ್ವೀಪ ಸಮೂಹದ ಉತ್ತರ ಸೆಂಟಿನೆಲ್ ನಡುಗಡ್ಡೆಯನ್ನು ಪ್ರವೇಶಿಸುವ ತನ್ನ ದುಸ್ಸಾಹಸದಲ್ಲಿ ಅಲ್ಲಿಯ ಮೂಲನಿವಾಸಿಗಳಿಂದ ಹತ್ಯೆಯಾದ ಅಮೆರಿಕನ್ ಪ್ರವಾಸಿ ಜಾನ್ ಅಲೆನ್ ಚೌ ತನ್ನ ಜರ್ನಲ್ನಲ್ಲಿ ಬರೆದಿದ್ದ ಕೊನೆಯ ವಾಕ್ಯಗಳಲ್ಲಿನ ಒಂದು ಸಾಲು.
ಈಗ ಮಾನವ ಶಾಸ್ತ್ರಜ್ಞರು ಮತ್ತು ಈ ನಡುಗಡ್ಡೆಗಳ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿರುವ ತಜ್ಞರು ಸರಕಾರದ ಆದೇಶವೊಂದನ್ನು ಪ್ರಶ್ನಿಸಿದ್ದಾರೆ. ಈ ಆದೇಶವೇ ಚೌ ದುಸ್ಸಾಹಸಕ್ಕೆ ಪ್ರೇರಣೆ ನೀಡಿತ್ತು ಎನ್ನುವುದು ಅವರ ವಾದವಾಗಿದೆ. ಅಂಡಮಾನ್-ನಿಕೋಬಾರ್ ದ್ವೀಪಸಮೂಹದ 29 ನಿಷೇಧಿತ ದ್ವೀಪಗಳಿಗೆ ಭೇಟಿ ನೀಡಲು ವಿದೇಶಿಯರು ಇನ್ನು ಮಂದೆ ವಿಶೇಷ ಅನುಮತಿಯನ್ನು ಪಡೆದುಕೊಳ್ಳಬೇಕಿಲ್ಲ ಎಂದು ಸರಕಾರವು ಕಳೆದ ಜೂನ್ನಲ್ಲಿ ಹೊರಡಿಸಿದ್ದ ಆದೇಶದಲ್ಲಿ ಹೇಳಿದ್ದು,ಇದೀಗ ಈ ಆದೇಶವು ಎಲ್ಲರ ಚರ್ಚಾಬಿಂದುವಾಗಿದೆ.
ಕೇಂದ್ರ ಗೃಹಸಚಿವಾಲಯದ ಜೂನ್ 29ರ ಈ ಅಧಿಸೂಚನೆಯು ಒಂದರ್ಥದಲ್ಲಿ ವಿಶ್ವದಲ್ಲಿಯ ಅತ್ಯಂತ ಸಂರಕ್ಷಿತ ದ್ವೀಪಗಳಲ್ಲೊಂದಾಗಿರುವ ಉತ್ತರ ಸೆಂಟಿನೆಲ್ಗೆ ವಿದೇಶಿಯರು ತಲುಪಲು ಅವಕಾಶವನ್ನು ಕಲ್ಪಿಸಿತ್ತು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಕ್ರಮವಾಗಿ ಹೊರಡಿಸಿದ್ದ ಈ ಅಧಿಸೂಚನೆಯಲ್ಲಿ ಭೇಟಿಗಾಗಿ ನಿರ್ಬಂಧಿತ ಪ್ರದೇಶ ಅನುಮತಿ(ಆರ್ಎಪಿ)ಯ ಅಗತ್ಯವಿಲ್ಲದ ದ್ವೀಪಗಳಲ್ಲಿ ಉತ್ತರ ಸೆಂಟಿನೆಲ್ ಕೂಡ ಒಂದಾಗಿತ್ತು.
ಮಾನವ ಶಾಸ್ತ್ರಜ್ಞ ವಿಶ್ವಜಿತ ಪಾಂಡ್ಯ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ಕ್ರಮವನ್ನು ಕೈಗೊಂಡಿದ್ದ ರಾಷ್ಠೀಯ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳ ಆಯೋಗವು ಆರೆಎಪಿ ಕುರಿತು ಸ್ಪಷ್ಟನೆ ನೀಡುವಂತೆ ಜು.13ರಂದು ಗೃಹ ಸಚಿವಾಲಯ ಮತ್ತು ಅಂಡಮಾನ್ ಆಡಳಿತಕ್ಕೆ ಸೂಚಿಸಿತ್ತಾದರೂ ಉತ್ತರವಿನ್ನೂ ಅದರ ಕೈಸೇರಿಲ್ಲ.
ದುರ್ಬಲ ಬುಡಕಟ್ಟುಗಳ ಬಗ್ಗೆ ಹೆಚ್ಚಿನ ಸೂಕ್ಷ್ಮತೆಯನ್ನು ಹೊಂದಿರುವಂತೆ ಮತ್ತು ಅನಗತ್ಯ ಬದಲಾವಣೆಗಳಿಗೆ ಕಾರಣವಾಗುವ ಪ್ರವಾಸೋದ್ಯಮವನ್ನು ನಿಲ್ಲಿಸುವಂತೆ ಆಯೋಗವು ಸರಕಾರಕ್ಕೆ ಸಲಹೆಯನ್ನೂ ನೀಡಿತ್ತು. ಈ ಬುಡಕಟ್ಟು ಜನಾಂಗಗಳಿಗೆ ರಕ್ಷಣೆಯನ್ನು ನೀಡುವಂತೆ ಆಗ್ರಹಿಸಿ ಅದು ಆ.8ರಂದು ಗೃಹಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರವನ್ನೂ ಬರೆದಿತ್ತು.
ಬಾಹ್ಯ ಜಗತ್ತಿನೊಂದಿಗೆ ಸಂಪರ್ಕವನ್ನು ಪ್ರತಿರೋಧಿಸುತ್ತಿರುವ ಪ್ರಾಚೀನ ಬುಡಕಟ್ಟು ಜನಾಂಗ ಸೆಂಟಿನೆಲಿಗಳಿಂದಾಗಿ ಈ ದ್ವೀಪವು ವಿಶ್ವದಲ್ಲಿ ಅತ್ಯಂತ ಸಂರಕ್ಷಿತ ದ್ವೀಪಗಳಲ್ಲೊಂದಾಗಿದೆ. ಈ ದ್ವೀಪದಲ್ಲಿರುವ ಸೆಂಟಿನೆಲಿಗಳ ಸಂಖ್ಯೆ 40ರಿಂದ 150ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಪ್ರವಾಸೋದ್ಯಮ ಮತ್ತು ಉದ್ಯಮವನ್ನುಉತ್ತೇಜಿಸಲು ಆರ್ಎಪಿಯನ್ನು ತೆಗೆಯುವಂತೆ ಆಗ್ರಹಿಸಿದ್ದ ಟೂರ್ ಆಪರೇಟರ್ಗಳು ಮತ್ತು ವಾಣಿಜ್ಯ ಸಂಘಗಳು ಸರಕಾರದ ಅಧಿಸೂಚನೆಯಲ್ಲಿ ಉತ್ತರ ಸೆಂಟಿನೆಲ್ ದ್ವೀಪವು ಇರುವುದನ್ನು ಕಂಡು ಅಚ್ಚರಿಗೊಳಗಾಗಿದ್ದರು ಎಂದು ಪೋರ್ಟ್ ಬ್ಲೇರ್ನಲ್ಲಿಯ ಮೂಲಗಳು ತಿಳಿಸಿವೆ.
ಇದಕ್ಕೆ ಅಂಡಮಾನ್ ಮತ್ತು ನಿಕೋಬಾರ್ ಕೇಂದ್ರಾಡಳಿತ ಪ್ರದೇಶವನ್ನು ಆಳುತ್ತಿರುವ ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಲೋಪವೇ ಕಾರಣವೆಂದು ಮೂಲಗಳು ಬೆಟ್ಟುಮಾಡಿವೆ.
ತಪ್ಪನ್ನು ಸರಿಪಡಿಸುವಂತೆ ತಾನು ಗೃಹಸಚಿವಾಲಯಕ್ಕೆ ಪತ್ರ ಬರೆಯುವುದಾಗಿ ಆಡಳಿತವು ತಿಳಿಸಿದೆ ಎಂದು ಈ ಮೂಲಗಳು ಹೇಳಿವೆಯಾದರೂ,ಅದು ಪತ್ರವನ್ನು ಬರೆದಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಚೌ 2016ರಲ್ಲಿ ಎರಡು ಬಾರಿ ಮತ್ತು ಈ ವರ್ಷದ ಆರಂಭದಲ್ಲಿ ಎರಡು ಬಾರಿ,ಹೀಗೆ ಒಟ್ಟು ಐದು ಬಾರಿ ಪೋರ್ಟ್ಬ್ಲೇರ್ಗೆ ಬಂದಿದ್ದ. ಆದರೆ ತನ್ನ ಐದನೇ ಭೇಟಿಯ ಸಂದರ್ಭದಲ್ಲಿ ಮಾತ್ರ ಉತ್ತರ ಸೆಂಟಿನೆಲ್ಗೆ ತೆರಳುವ ಸಾಹಸ ಮಾಡಿದ್ದ. ಆರ್ಎಪಿಯನ್ನು ರದ್ದುಗೊಳಿಸಿರುವ ಸರಕಾರಿ ಅಧಿಸೂಚನೆಯನ್ನು ಆತ ನೋಡಿದ್ದಿರಬಹುದು ಮತ್ತು ಉತ್ತರ ಸೆಂಟಿನೆಲ್ಗೆ ತೆರಳಲು ತಾನು ಸ್ವತಂತ್ರನಾಗಿದ್ದೇನೆ ಎಂದು ಭಾವಿಸಿದ್ದಿರಬಹುದು ಎಂದು ಅಂಡಮಾನ್ ಕ್ರಾನಿಕಲ್ ಪತ್ರಿಕೆಯ ಸಂಪಾದಕ ಡೆನಿಸ್ ಗಿಲೆಸ್ ಹೇಳಿದರು. ಆದರೆ ಆಡಳಿತದ ಅಧಿಕಾರಿಗಳು ನಿರ್ಬಂಧಗಳು ಈಗಲೂ ಜಾರಿಯಲ್ಲಿವೆ ಎಂದಿದ್ದಾರೆ.ಉದಾಹರಣೆಗೆ ಬುಡಕಟ್ಟು ದ್ವೀಪಗಳಿಗೆ ತೆರಳಲು ಸ್ಥಳೀಯರು ಮತ್ತು ವಿದೇಶಿಯರಿಗೆ ಪಾಸ್ ಅಗತ್ಯವಾಗಿದೆ,ಅಲ್ಲದೆ ಉತ್ತರ ಸೆಂಟಿನೆಲ್ ದ್ವೀಪದ ಸುತ್ತಲಿನ ಐದು ಕಿ.ಮೀ.ಪ್ರದೇವು ನಿಷೇಧಿತ ವಲಯವಾಗಿದೆ ಎಂದು ಅವರು ಹೇಳಿದ್ದಾರೆ.
ತಾನು ತಪ್ಪು ಮಾಡುತ್ತಿದ್ದೇನೆ ಎನ್ನುವುದು ಚೌಗೆ ಗೊತ್ತಿತ್ತು ಎಂದು ಹೇಳಿದ ದ್ವೀಪ ಸಮೂಹದ ಡಿಜಿಪಿ ದೀಪೇಂದ್ರ ಪಾಠಕ್ ಅವರು,ಆತ ದ್ವೀಪಕ್ಕೆ ತನ್ನ ಪ್ರವಾಸವನ್ನು ನಿಖರವಾಗಿ ಯೋಜಿಸಿದ್ದ. ಆತ ಮೀನುಗಾರರರೊಂದಿಗೆ ರಾತ್ರಿ ಅಲ್ಲಿಗೆ ಪ್ರಯಾಣಿಸಿದ್ದ. ಬಳಿಕ ಪುಟ್ಟ ದೋಣಿಯಲ್ಲಿ ನಸುಕು ಹರಿಯುವ ಮುನ್ನವೇ ದ್ವೀಪವನ್ನು ಸೇರಿಕೊಂಡಿದ್ದ. ದೋಣಿ ಬಳಿಕ ಅಲೆಗಳ ಸೆಳೆತಕ್ಕೆ ಮತ್ತೆ ಸಮುದ್ರಕ್ಕೆ ವಾಪಸಾಗುತ್ತದೆ ಮತ್ತು ಯಾರಿಗೂ ಶಂಕೆಯುಂಟಾಗುವುದಿಲ್ಲ ಎಂದಾತ ಭಾವಿಸಿದ್ದ. ಆದರೆ ಇದೊಂದು ದುಸ್ಸಾಹಸವಾಗಿತ್ತು ಎಂದು ಮಾತ್ರ ತಾನು ಹೇಳಬಲ್ಲೆ ಎಂದರು.
ಆದರೆ ಸರಕಾರದ ಅಂಡಮಾನ್ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಅವಿವೇಕದ ನಿರ್ಣಯವು ತುಂಬ ದುಬಾರಿಯಾಗಬಹುದು ಎಂದು ಮಾನವ ಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.