ಮೋದಿಗೆ ಹಿಂದೂ-ಮುಸ್ಲಿಮರನ್ನು ಒಡೆಯುವ ಕಾಯಿಲೆ: ಕೆಸಿಆರ್
ಹೈದರಾಬಾದ್, ನ. 23: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಹಿಂದೂ ಹಾಗೂ ಮುಸ್ಲಿಮರನ್ನು ಒಡೆಯುವ ಕಾಯಿಲೆ ಇದೆ. ಇದರಿಂದಾಗಿ ತೆಲಂಗಾಣದಲ್ಲಿ ಮುಸ್ಲಿಮರು ಹಾಗೂ ಪರಿಶಿಷ್ಟ ಜಾತಿಯ ಮೀಸಲಾತಿ ತಡೆಯುತ್ತಿದೆ ಎಂದು ಟಿಆರ್ಎಸ್ ವರಿಷ್ಠ ಕೆ. ಚಂದ್ರಶೇಖರ ರಾವ್ ಶುಕ್ರವಾರ ಹೇಳಿದ್ದಾರೆ.
ನರ್ಸಂಪೇಟ್ನಲ್ಲಿ ಶುಕ್ರವಾರ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮೋದಿಗೆ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳುವ ಹೃದಯವಿಲ್ಲ. ಮೋದಿ ಹಾಗೂ ಬಿಜೆಪಿಗೆ ಕೋಮುವಾದಿ ಹುಚ್ಚು ಹಿಡಿದಿದೆ ಎಂದರು. ರಾಜ್ಯ ಸರಕಾರದ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮುಸ್ಲಿಮರ ಮೀಸಲಾತಿಯನ್ನು ಶೇ. 4ರಿಂದ 12 ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 6ರಿಂದ 10ಕ್ಕೆ ಏರಿಸಲು ರಾಜ್ಯ ವಿಧಾನ ಸಭೆಯಲ್ಲಿ ನಿರ್ಣಯ ಕೈಗೊಂಡರೂ ಕೇಂದ್ರ ಸರಕಾರ ತಡೆ ಹಿಡಿದಿದೆ ಎಂದು ಅವರು ತಿಳಿಸಿದರು.
ನರೇಂದ್ರ ಮೋದಿ ಹಾಗೂ ಬಿಜೆಪಿಗೆ ವ್ಯಾಧಿ ಇದೆ. ಪ್ರತಿಯೊಂದರಲ್ಲೂ ಅವರು ವಿಭಜನೆಯನ್ನು ನೋಡುತ್ತಾರೆ. ಹಿಂದೂ-ಮುಸ್ಲಿಮರನ್ನು ಕೂಡ ವಿಭಜಿಸಿ ನೋಡುತ್ತಾರೆ. ಅವರು ಬೇರೇನನ್ನೂ ನೋಡುವುದಿಲ್ಲ. ಆದುದರಿಂದಲೇ ಮೀಸಲಾತಿ ಏರಿಕೆಗೆ ಒಪ್ಪಿಗೆ ನೀಡದೆ, ಬಾಕಿ ಉಳಿಸಿದೆ ಎಂದು ಅವರು ಹೇಳಿದರು. ನರೇಂದ್ರ ಮೋದಿ ಸರಕಾರ ವ್ಯಾಧಿ ಪೀಡಿತವಾಗಿದೆ. ಅದು ಅಲ್ಪಸಂಖ್ಯಾತರು ವರ್ಸಸ್ ಹಿಂದೂ ಎಂದು ಹೇಳುತ್ತಿದೆ. ಅದಕ್ಕೆ ಕೋಮುವಾದಿ ಹುಚ್ಚು ಹಿಡಿದಿದೆ. ಆದುದರಿಂದಲೇ ಅದು ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಮರ ಮೀಸಲಾತಿ ತಡೆ ಹಿಡಿದಿದೆ ಎಂದು ಅವರು ತಿಳಿಸಿದರು.
ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲ 17 ಲೋಕಸಭಾ ಕ್ಷೇತ್ರಗಳಲ್ಲಿ ಜನರು ಟಿಆರ್ಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ, ಅವರ ಮೀಸಲಾತಿ ಏರಿಕೆಯ ಬೇಡಿಕೆಯನ್ನು ಸ್ವೀಕರಿಸಲಾಗುವುದು ಎಂದು ಭರವಸೆ ನೀಡಿದರು. ವಿಧಾನ ಸಭೆ ಚುನಾವಣೆಯಲ್ಲಿ ಮಾತ್ರವಲ್ಲ, ಲೋಕಸಭೆ ಚುನಾವಣೆಯಲ್ಲಿ ಎಲ್ಲ 17 ಸ್ಥಾನಗಳಲ್ಲಿ ಜಯಗಳಿಸಲು ನೆರವಾಗಿ ಎಂದು ಚಂದ್ರಶೇಖರ ರಾವ್ ಹೇಳಿದರು.