ಉಡುಪಿ: ಪಾಕಪಾತ್ರೆಗಳ ಪುನಶ್ಚೇತನಕ್ಕೆ ಶಿಬಿರ
ಉಡುಪಿ, ನ.23: ಕರಾವಳಿ ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ಅಡುಗೆಗಳಲ್ಲಿ ಬಳಸುತಿದ್ದ ತಾಮ್ರದ ಪಾತ್ರೆಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಇಲ್ಲವೆಂಬಷ್ಟು ಕಡಿಮೆಯಾಗಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶ್ರೀಅದಮಾರು ಮಠದ ಶ್ರೀಆನಂದ ಸಮಿತಿಯ ವತಿಯಿಂದ ಪಾಕಪಾತ್ರೆಗಳ ಪುನಶ್ಚೇತನಕ್ಕೆ ಮೂರು ದಿನಗಳ ಶಿಬಿರ ‘ಪಾತ್ರ’ ಶನಿವಾರದಿಂದ ಪ್ರಾರಂಭಗೊಳ್ಳಲಿದೆ.
ಕಾರ್ಯಕ್ರಮವನ್ನು ರಥಬೀದಿಯಲ್ಲಿರುವ ಅದಮಾರು ಮಠದಲ್ಲಿ ಬೆಳಗ್ಗೆ 9:30ಕ್ಕೆ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀ ಉದ್ಘಾಟಿಸಲಿದ್ದಾರೆ. ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀ ಅಧ್ಯಕ್ಷತೆ ವಹಿಸಲಿದ್ದಾರೆ. ವಿಷಯದ ಕುರಿತು ಡಾ.ಶ್ರೀಧರ ಬಾಯರಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ‘ಪಾತ್ರ’ದ ಕುರಿತು ಉಡುಪಿಯ ಪಾಕಶಾಸ್ತ್ರಜ್ಞ ವಿಷ್ಣುಮೂರ್ತಿ ಭಟ್ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಉಡುಪಿಯ ಪ್ರಸಿದ್ಧ ತಾಮ್ರ ಪಾತ್ರೆ ಕುಶಲಕರ್ಮಿಗಳನ್ನು ಸನ್ಮಾನಿಸಲಾಗುವುದು.
ಅಂಬಾಗಿಲಿನ ಪೀಟರ್ ಡಿಸೋಜ, ಬಾರಕೂರಿನ ಬಿ.ಶ್ರೀಕಾಂತ ಆಚಾರ್ಯ ಹಾಗೂ ಸಿಪ್ರಿಯನ್ ಡಿಸಿಲ್ವಾ ಅವರು ತರಬೇತುದಾರರಾಗಿ ಮೂರು ದಿನಗಳ ಕಾಲ ತಾಮ್ರದ ಪಾತ್ರೆಗಳ ರಿಪೇರಿ, ಕಲಾಯಿ ಹಾಗೂ ತಯಾರಿಕೆ ಕುರಿತು ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ ಎಂದು ಆನಂದ ಸಮಿತಿಯ ಪ್ರಕಟಣೆ ತಿಳಿಸಿದೆ.