ಮುಖ್ಯಸ್ಥರನ್ನು ಹೊರಹಾಕಿದ್ದು ಸಿಬಿಐ ಸ್ವಚ್ಛಗೊಳಿಸಲು: ಜೇಟ್ಲಿ
ಹೊಸದಿಲ್ಲಿ, ನ. 24: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವುದು ದೇಶದ ಅತ್ಯುನ್ನತ ತನಿಖಾ ಸಂಸ್ಥೆಯನ್ನು ಸ್ವಚ್ಛಗೊಳಿಸುವ ಸಲುವಾಗಿ ಎಂದು ಕೇಂದ್ರ ಹಣಕಾಸು ಸಚಿವ ಪ್ರತಿಪಾದಿಸಿದ್ದಾರೆ.
ಟೈಮ್ಸ್ನೌಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಜೇಟ್ಲಿ, ಸಿಬಿಐಯ ಕಾರ್ಯನಿರ್ವಹಣೆ ಹೆಚ್ಚು ವೃತ್ತಿಪರವಾಗಬೇಕು ಎಂಬ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ. ಆದರೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ಬಗ್ಗೆ ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ನುಣುಚಿಕೊಂಡರು. ವರ್ಮಾ ಅರ್ಜಿಯ ಅಂಶಗಳು, ಸರ್ಕಾರದ ಹಿರಿಯ ಅಧಿಕಾರಿಗಳ ದೂರವಾಣಿಯನ್ನು ಅನಧಿಕೃತವಾಗಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಆದಾಗ್ಯೂ ಅತ್ಯುನ್ನತ ತನಿಖಾ ಸಂಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಒಪ್ಪಿಕೊಂಡರು.
"ಏನೇ ನಡೆದಿದ್ದರೂ ಇದೀಗ ವಿವಾದ ಕೇಂದ್ರ ವಿಚಕ್ಷಣಾ ಆಯೋಗದ ಮುಂದಿದೆ. ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದು ಸ್ವಚ್ಛಗೊಳಿಸುವ ಮತ್ತು ವೃತ್ತಿಪರಗೊಳಿಸುವ ಪ್ರಕ್ರಿಯೆ" ಎಂದು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆ ಕಡಿಮೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಕೂಡಾ ಜೇಟ್ಲಿ ನಿರಾಕರಿಸಿದರು, ವಿಸ್ತತ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸರ್ಕಾರ ಹೆಚ್ಚು ಜಾಗೃತವಾಗಿರಬೇಕು. ಇಷ್ಟು ಮಾತ್ರವಲ್ಲದೇ ಒಂದು ಚರ್ಚೆ ನಡೆದಿದೆ ಎಂದಾಕ್ಷಣ ಸಂಸ್ಥೆ ನಾಶವಾಗಿದೆ ಎಂಬ ಅರ್ಥವಲ್ಲ ಎಂದು ಹೇಳಿದರು. "ಕೆಲ ವಿಚಾರಗಳಲ್ಲಿ ನಮ್ಮ ಆಸಕ್ತಿ ಇದೆ. ಈ ಪೈಕಿ ಕೆಲವು ಸರ್ಕಾರದ ಸುಪರ್ದಿಯಲ್ಲಿದ್ದರೆ ಮತ್ತೆ ಕೆಲ ವಿಚಾರಗಳು ಆರ್ಬಿಐ ವ್ಯಾಪ್ತಿಯಲ್ಲಿ ಬರುತ್ತವೆ. ಆದರೆ ಅಭಿಪ್ರಾಯಬೇಧವನ್ನು ಸಾಂಸ್ಥಿಕ ವೈಫಲ್ಯ ಎನ್ನುವಂತಿಲ್ಲ" ಎಂದು ಸಮರ್ಥಿಸಿಕೊಂಡರು.
"ನಾವು ಆರ್ಬಿಐ ಸ್ವಾಯತ್ತತೆಯನ್ನು ಗೌರವಿಸುತ್ತೇವೆ. ಆದರೆ ಅದೇ ವೇಳೆ ಕೆಲ ವಲಯಗಳು ದ್ರವ್ಯತೆ ಅಥವಾ ಸಾಲದಿಂದಾಗಿ ಶಕ್ತಿಹೀನವಾದಾಗ, ಈ ವಿಷಯಗಳನ್ನು ನಾವು ಎತ್ತಬೇಕಾಗುತ್ತದೆ. ಆರ್ಬಿಐ ಜತೆ ಇದನ್ನು ಮಾಡಿದ್ದೇವೆ. ಸ್ವಾಯತ್ತತೆ ಬಗ್ಗೆ ಮಾತನಾಡುವ ಅಂಕಣಕಾರರೊಬ್ಬರು ಪ್ರಗತಿ ತಟಸ್ಥವಾಗಿದೆ ಎಂದು ಹೇಳಿದ್ದಾರೆ. ಆದ್ದರಿಂದ ಯಾರು ಸಾಲ ಮತ್ತು ದ್ರವ್ಯತೆ ನೀಡಬೇಕು" ಎಂದು ಮರುಪ್ರಶ್ನೆ ಎಸೆದರು.