ಕಲ್ಲಿದ್ದಲು ಹಗರಣದಲ್ಲಿ ಮಾಜಿ ಐಎಎಸ್ ಅಧಿಕಾರಿ ಎಚ್ಸಿ ಗುಪ್ತಾ ಅಪರಾಧಿ: ದಿಲ್ಲಿ ನ್ಯಾಯಾಲಯ
![ಕಲ್ಲಿದ್ದಲು ಹಗರಣದಲ್ಲಿ ಮಾಜಿ ಐಎಎಸ್ ಅಧಿಕಾರಿ ಎಚ್ಸಿ ಗುಪ್ತಾ ಅಪರಾಧಿ: ದಿಲ್ಲಿ ನ್ಯಾಯಾಲಯ ಕಲ್ಲಿದ್ದಲು ಹಗರಣದಲ್ಲಿ ಮಾಜಿ ಐಎಎಸ್ ಅಧಿಕಾರಿ ಎಚ್ಸಿ ಗುಪ್ತಾ ಅಪರಾಧಿ: ದಿಲ್ಲಿ ನ್ಯಾಯಾಲಯ](https://www.varthabharati.in/sites/default/files/images/articles/2018/11/30/165774.png)
ಹೊಸದಿಲ್ಲಿ, ನ.30: ಕಲ್ಲಿದ್ದಲು ಹಗರಣದಲ್ಲಿ ಮಾಜಿ ಐಎಎಸ್ ಅಧಿಕಾರಿ ಎಚ್ಸಿ ಗುಪ್ತಾ ಭ್ರಷ್ಟಾಚಾರ ಹಾಗೂ ಕ್ರಿಮಿನಲ್ ಸಂಚಿನಲ್ಲಿ ಅಪರಾಧಿಗಳು ಎಂದು ದಿಲ್ಲಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಗುಪ್ತಾರಲ್ಲದೆ ಹಗರಣದಲ್ಲಿ ಭಾಗಿಯಾದ ಇತರ ಐವರು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿರುವ ದಿಲ್ಲಿ ನ್ಯಾಯಾಲಯ ತಪ್ಪಿತಸ್ಥರನ್ನು ನ್ಯಾಯಾಂಗ ಕಸ್ಟಡಿಗೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಶಿಕ್ಷೆಯ ಪ್ರಮಾಣ ವಾದ ಆಲಿಸಲು ಡಿ.3 ರಂದು ಮುಂದಿನ ವಿಚಾರಣೆ ನಿಗದಿಪಡಿಸಲಾಗಿದೆ. ತಪ್ಪಿತಸ್ಥರು ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಲಿದ್ದಾರೆ.
1971ರ ಬ್ಯಾಚಿನ ಐಎಎಸ್ ಅಧಿಕಾರಿ ಗುಪ್ತಾ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಎರಡು ವರ್ಷಗಳ ಕಾಲ ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದರು. 2008ರಲ್ಲಿ ನಿವೃತ್ತಿಯಾಗಿದ್ದರು.
2017ರ ಡಿಸೆಂಬರ್ನಲ್ಲಿ ವಿಶೇಷ ನ್ಯಾಯಾಲಯ ಗುಪ್ತಾ ಹಾಗೂ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮಧು ಕೋಡಾರನ್ನು ಭ್ರಷ್ಟಾಚಾರ ಹಾಗೂ ಇತರ ಆರೋಪಗಳಿಗೆ ಸಂಬಂಧಿಸಿ ದೋಷಿಗಳೆಂದು ತೀರ್ಪು ನೀಡಿತ್ತು.