ಬಾರಕೂರಿನಲ್ಲಿ ಅಳುಪೋತ್ಸವ ಆಚರಣೆ: ಡಾ.ಜಯಮಾಲಾ
ಉಡುಪಿ, ನ.30: ಜನವರಿ ತಿಂಗಳ ಕೊನೆಯಲ್ಲಿ ಬಾರಕೂರಿನಲ್ಲಿ ಅಳುಪೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲೆಯ ಪಾರಂಪರಿಕ, ವೈವಿಧ್ಯತೆ ಮತ್ತು ಸಾಂಸ್ಕೃತಿಕೆಯನ್ನು ಸಾರುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
ಬಾರಕೂರು ಸುತ್ತಮುತ್ತಲಿನ ಪಾರಂಪರಿಕ ಸ್ಥಳಗಳನ್ನು ಪ್ರವಾಸಿಗರಿಗೆ ಪರಿಚ ಯಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ, ಯುವ ಜನತೆಯನ್ನು ಆಕರ್ಷಿಸಲು ಸಾಹಸ ಕ್ರೀಡೆಗಳನ್ನು ಏರ್ಪಡಿಸಿ, ಜಾನಪದ ಜಾತ್ರೆ, ಜಾನಪದ ಕ್ರೀಡೆಗಳು, ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೊಂಬೆ ಪ್ರದರ್ಶನ, ಆಹಾರಮೇಳ, ಫಲಪುಷ್ಪ ಪ್ರದರ್ಶನವನ್ನು ಆಳುಪೋತ್ಸವದಲ್ಲಿ ಏರ್ಪಡಿ ಸುವಂತೆ ಡಾ.ಜಯಮಾಲ ಸೂಚಿಸಿದರು.
ಅಳುಪೋತ್ಸವ ಆಚರಣೆಗೆ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದ ಸಚಿವರು, ಕಾರ್ಯಕ್ರದ ಯಶಸ್ವಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಹಾಗೂ ಬಾರಕೂರಿನ ಜನತೆಯನ್ನು ಒಳಗೊಂಡ ಸಮಿತಿಯನ್ನು ರಚಿಸಿಕೊಂಡು ಕಾರ್ಯಕ್ರಮ ಆಯೋಜಿಸಿ, ಉದ್ಘಾಟನೆಯ ದಿನದಂದು ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತೆ ಹಾಗೂ ವಿವಿಧ ವೇದಿಕೆಗಳನ್ನು ನಿರ್ಮಿಸಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಉಪಸ್ಥಿತರಿದ್ದರು.