‘ಕ್ಯಾಪ್ಟನ್’ ಪದ ಬಳಕೆ: ನವಜೋತ್ ಸಿಧು ರಾಜೀನಾಮೆಗೆ ಸಿಎಂ ನಿಷ್ಠರ ಆಗ್ರಹ
ಚಂಡೀಗಡ, ಡಿ.2: ಪಂಜಾಬ್ನ ಸಚಿವ ನವಜೋತ್ ಸಿಂಗ್ ಮಾಧ್ಯಮಗಳ ಜೊತೆ ಮಾತನಾಡುವಾಗ ಮಾಡಿರುವ ‘ಕ್ಯಾಪ್ಟನ್’ ಪದಬಳಕೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಂಜಾಬ್ ಮುಖ್ಯಮಂತ್ರಿ ನಿಷ್ಠಾವಂತರು, ಸಿಧು ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಿಧು ಅವರು ಅಮರೀಂದರ್ ಸಿಂಗ್ರನ್ನು ಪಂಜಾಬ್ನ ಕ್ಯಾಪ್ಟನ್ ಎಂದು ಪರಿಗಣಿಸುವುದಿಲ್ಲವಾದರೆ , ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು ಎಂದು ಸಚಿವ ತೃಪತ್ ರಾಜಿಂದರ್ ಸಿಂಗ್ ಬಾಜ್ವ ಹೇಳಿದ್ದಾರೆ. ಸಿಧುಗೆ ಕಳಿಸಿರುವ ಪತ್ರದಲ್ಲಿ “ನಿಮ್ಮ ಪ್ರತಿಕ್ರಿಯೆಯ ವೀಡಿಯೊ ತುಣುಕನ್ನು ನಾನು ನೋಡಿದೆ. ಅದರಲ್ಲಿ ನೀವು ಪದೇ ಪದೇ, ರಾಹುಲ್ ಗಾಂಧಿ ನನ್ನ ಕ್ಯಾಪ್ಟನ್. ಅಮರೀಂದರ್ ಸಿಂಗ್ ನನಗೆ ತಂದೆಯ ಸಮಾನರು ಎಂದು ಹೇಳಿಕೆ ನೀಡಿದ್ದೀರಿ. ರಾಹುಲ್ ಗಾಂಧಿ ದೇಶದ ಎಲ್ಲಾ ಕಾಂಗ್ರೆಸಿಗರ (ಅಮರೀಂದರ್ ಸೇರಿದಂತೆ) ಕ್ಯಾಪ್ಟನ್ ಆಗಿದ್ದಾರೆ ನಿಜ. ಆದರೆ ಇದೇ ವೇಳೆ, ಅಮರೀಂದರ್ ಸಿಂಗ್ ಪಂಜಾಬ್ ಕಾಂಗ್ರೆಸಿಗರ ನಿರ್ವಿವಾದ ನಾಯಕನಾಗಿದ್ದಾರೆ” ಎಂದು ಬರೆದಿದ್ದಾರೆ.
ಹೀಗೆ ಹೇಳಿಕೆ ನೀಡುವಾಗ ನಿಮ್ಮ ನಿಲುವು, ನಡವಳಿಕೆ ಜಿಗುಪ್ಸೆ ಹುಟ್ಟಿಸುವಂತಿತ್ತು ಮತ್ತು ತುಂಬಾ ನೋವುಂಟು ಮಾಡಿದೆ . ಅಲ್ಲದೆ ಮಾತಿನ ಧ್ವನಿ ಅಮರೀಂದರ್ ಸಿಂಗ್ರನ್ನು ಹೀಯಾಳಿಸುವಂತಿತ್ತು. ಅಮರೀಂದರ್ ಸಿಂಗ್ರನ್ನು ನಿಮ್ಮ ನಾಯಕನೆಂದು ಪರಿಗಣಿಸುವುದಿಲ್ಲವಾದರೆ ಸಚಿವ ಸಂಪುಟದಲ್ಲಿ ಮುಂದುವರಿಯಲು ನಿಮಗೆ ನೈತಿಕ ಹಕ್ಕಿಲ್ಲ. ನಿಮಗೆ ಉನ್ನತವಾದ ಕನಸಿದೆ. ಮಾತು ಕಡಿಮೆ ಮಾಡಬೇಕು ಎಂಬುದು ನಿಮ್ಮಲ್ಲಿ ವಿನಮ್ರ ಕೋರಿಕೆ. ಸಾರ್ವಜನಿಕವಾಗಿ ಮಾತಾಡುವಾಗ ಉತ್ಪ್ರೇಕ್ಷೆಯ ಶೈಲಿ ನಿಮ್ಮ ವೃತ್ತಿಜೀವನಕ್ಕೆ ಸಮಸ್ಯೆ ತಂದೊಡ್ಡುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಆದರೆ ಬಳಿಕ ಜಲಂಧರ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಾಜ್ವ, ತಾನು ಸಿಧು ರಾಜೀನಾಮೆಗೆ ಆಗ್ರಹಿಸಿದ್ದೇನೆ ಎಂಬ ವರದಿಯನ್ನು ತಳ್ಳಿಹಾಕಿದರು. ನವಜೋತ್ ಸಿದ್ದು ಓರ್ವ ಅಸಾಧಾರಣ ವ್ಯಕ್ತಿ. ಆದ್ದರಿಂದ ಗಂಟೆಗೊಮ್ಮೆ ಹೇಳಿಕೆ ಬದಲಾಯಿಸುವುದು ಸರಿಯಲ್ಲ. ಅವರು ರಾಜಕೀಯ ಬದುಕಿನಲ್ಲೂ ಸುದೀರ್ಘವಾದ ಇನ್ನಿಂಗ್ಸ್ ಆಡಬೇಕಿದೆ ಎಂದಷ್ಟೇ ಹೇಳಿರುವುದಾಗಿ ಬಾಜ್ವ ತಿಳಿಸಿದ್ದಾರೆ.