ದಿಲ್ಲಿಯಲ್ಲಿ ಹಿಟ್ ಆ್ಯಂಡ್ ರನ್ : ಬೀದಿಬದಿ ಹಣ್ಣು ವ್ಯಾಪಾರಿ ಬಲಿ
ಹೊಸದಿಲ್ಲಿ, ಡಿ.3: ನೈರುತ್ಯ ದಿಲ್ಲಿಯ ದ್ವಾರಕಾದಲ್ಲಿ ರವಿವಾರ ಮಧ್ಯರಾತ್ರಿ ವೇಗವಾಗಿ ಚಲಿಸುತ್ತಿದ್ದ ಮರ್ಸಿಡಿಸ್-ಬೆನ್ಝ್ ಕಾರು ಇಬ್ಬರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯಲ್ಲಿ ಬೀದಿಬದಿಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟರೆ, ಇನ್ನೊಬ್ಬರು ಗಾಯಗೊಂಡಿದ್ದಾರೆ.
ಹತ್ತಿರದ ಹೋಲ್ಸೇಲ್ ತರಕಾರಿ ಮಾರುಕಟ್ಟೆಯಿಂದ ಹಣ್ಣುಗಳನ್ನು ತುಂಬಿಸಿಕೊಂಡು ವ್ಯಕ್ತಿಯೊಬ್ಬ ಹಣ್ಣಿನ ಗಾಡಿ ತಳ್ಳಿಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಲಕ್ಸುರಿ ಕಾರು ನಿಯಂತ್ರಣ ಕಳೆದುಕೊಂಡು ಹಣ್ಣು ವ್ಯಾಪಾರಿಗೆ ಢಿಕ್ಕಿ ಹೊಡೆದಿದೆ. ಈ ಘಟನೆಯು ರಾತ್ರಿ 11:30ರ ಸುಮಾರಿಗೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಣ್ಣುವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ದ್ವಾರಕಾ ಸೆಕ್ಟರ್-7ರಲ್ಲಿ ರೋಡ್ನಲ್ಲಿ ತಳ್ಳುಗಾಡಿಯಲ್ಲಿದ್ದ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಸೆರೆಯಾಗಿದೆ. ಕಾರನ್ನು ಪತ್ತೆ ಹಚ್ಚಿ, ಚಾಲಕನನ್ನು ಬಂಧಿಸಲು ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.