ಸಿಜೆಐ ದೀಪಕ್ ಮಿಶ್ರಾರನ್ನು 'ಬಾಹ್ಯಶಕ್ತಿ'ಗಳು ನಿಯಂತ್ರಿಸುತ್ತಿದೆ ಎಂದೆನಿಸಿತ್ತು: ಜಸ್ಟಿಸ್ ಜೋಸೆಫ್ ಕುರಿಯನ್
ಹೊಸದಿಲ್ಲಿ, ಡಿ.3: ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಲಾಗುತ್ತಿದೆ ಎಂಬ ಅನುಮಾನ ನಿವೃತ್ತ ಸಿಜೆಐ ದೀಪಕ್ ಮಿಶ್ರಾ ಅವಧಿಯಲ್ಲಿ ನಮಗೆ ಮೂಡಿತ್ತು” ಎಂಬ ಸ್ಫೋಟಕ ಮಾಹಿತಿಯನ್ನು ನಿವೃತ್ತ ನ್ಯಾಯಮೂರ್ತಿ ಜೋಸೆಫ್ ಕುರಿಯನ್ ಹೊರಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಜನವರಿ 12ರಂದು ತಾವು ಹಾಗೂ ಇತರ ಮೂವರು ಹಿರಿಯ ನ್ಯಾಯಮೂರ್ತಿಗಳು ಸಿಜೆಐ ವಿರುದ್ಧ ಬಹಿರಂಗ ಹೇಳಿಕೆ ನಿಡಬೇಕಾಯಿತು ಎಂದು ಅವರು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. "ಅವು ಸುಪ್ರೀಂಕೋರ್ಟ್ನ ಪ್ರಕ್ಷುಬ್ಧ ದಿನಗಳು. ಈ ಕಾರಣದಿಂದ ನ್ಯಾಯಮೂರ್ತಿಗಳಾದ ಚೆಲಮೇಶ್ವರ, ರಂಜನ್ ಗೊಯೋಯ್ ಹಾಗೂ ಮದನ್ ಬಿ.ಲೋಕೂರ್ ಜತೆ ಸೇರಿ ಪತ್ರಿಕಾಗೋಷ್ಠಿ ನಡೆಸಿದೆವು" ಎಂದು ಹೇಳಿದ್ದಾರೆ.
ದೀಪಕ್ ಮಿಶ್ರಾ ಅವರು ಅಧಿಕಾರ ವಹಿಸಿಕೊಂಡ ನಾಲ್ಕು ತಿಂಗಳಲ್ಲೇ ಏನು ಎಡವಟ್ಟಾಯಿತು ಎಂಬ ಪ್ರಶ್ನೆಗೆ, "ಸುಪ್ರೀಂಕೋರ್ಟ್ ಪ್ರಕರಣಗಳನ್ನು ವಿವಿಧ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠಗಳಿಗೆ ಹಂಚಿಕೆ ಮಾಡುವುದಲ್ಲಿ ಬಾಹ್ಯ ಒತ್ತಡಗಳು ಕೆಲಸ ಮಾಡಿದ ಹಲವು ನಿದರ್ಶನಗಳಿವೆ. ಅಂತೆಯೇ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲೂ ಇಂಥ ಶಕ್ತಿಗಳು ಕೆಲಸ ಮಾಡುತ್ತಿದ್ದವು" ಎಂದು ವಿವರಿಸಿದ್ದಾರೆ.
"ಸಿಜೆಐಯವರನ್ನು ಹೊರಗಿನ ವ್ಯಕ್ತಿ ನಿಯಂತ್ರಿಸುತ್ತಿದ್ದಾರೆ ಎಂಬ ಭಾವನೆ ನಮ್ಮಲ್ಲಿ ಬಂದಿತ್ತು. ಆದ್ದರಿಂದ ನಾವು ಅವರನ್ನು ಭೇಟಿ ಮಾಡಿ ಈ ಬಗ್ಗೆ ಕೇಳಿದೆವು. ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಮತ್ತು ಸುಪ್ರೀಂ ಕೋರ್ಟ್ ಘನತೆ ಎತ್ತಿಹಿಡಿಯುವಂತೆ ಲಿಖಿತವಾಗಿಯೂ ಕೋರಿದೆವು. ಎಲ್ಲ ಪ್ರಯತ್ನಗಳು ವಿಫಲವಾದಾಗ ಪತ್ರಿಕಾಗೋಷ್ಠಿ ನಡೆಸುವ ನಿರ್ಧಾರಕ್ಕೆ ಬಂದೆವು" ಎಂದಿದ್ದಾರೆ.
ಬಾಹ್ಯ ಒತ್ತಡಗಳ ಬಗ್ಗೆ ವಿವರಣೆ ಕೇಳಿದಾಗ, "ಬೇರೆ ಬೇರೆ ಆಯ್ದ ಪೀಠಗಳಿಗೆ, ರಾಜಕೀಯವಾಗಿ ಪಕ್ಷಪಾತ ಭಾವನೆ ಹೊಂದಿದ್ದ ಆಯ್ದ ನ್ಯಾಯಮೂರ್ತಿಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡುವಲ್ಲಿ ಮೇಲ್ನೋಟಕ್ಕೇ ಇಂತಹ ಭಾವನೆ ಬರುತ್ತಿತ್ತು" ಎಂದು ಉತ್ತರಿಸಿದರು.