ಬುಲಂದ್ಶಹರ್ ಪೊಲೀಸ್ ಹತ್ಯೆಗೆ ಉ.ಪ್ರ. ಸಿಎಂ ಆದಿತ್ಯನಾಥ್ ದಿವ್ಯಮೌನ
ಗೋಹತ್ಯೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ
ಲಕ್ನೊ, ಡಿ.5: ಗುಂಪು ಹಿಂಸಾಚಾರದಲ್ಲಿ ಬುಲಂದ್ಶಹರ್ ಪೊಲೀಸ್ ಅಧೀಕ್ಷಕ ಹತ್ಯೆಯಾಗಿದ್ದಕ್ಕೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಆದರೆ, ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರಕಾರ ಮಾತ್ರ ಗುಂಪು ಹತ್ಯೆಗೀಡಾದ ಪೊಲೀಸ್ ಅಧಿಕಾರಿಯ ಬಗ್ಗೆ ತುಟಿಬಿಚ್ಚದೆ ವೌನವಹಿಸಿದೆ. ಇದು ಹಲವು ಅನುಮಾನಕ್ಕೆ ಎಡೆ ಮಾಡಿದೆ.
ಬುಲಂದ್ಶಹರ್ನಲ್ಲಿ ಮಂಗಳವಾರ ರಾತ್ರಿ ಸಭೆ ನಡೆಸಿದ ಮುಖ್ಯಮಂತ್ರಿ ಆದಿತ್ಯನಾಥ್ ಗೋಹತ್ಯೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಹಾಜರಾಗಿದ್ದರು.
ಘಟನೆಯು ಒಂದು ದೊಡ್ಡ ಪಿತೂರಿಯ ಭಾಗ ಎಂದು ಅಭಿಪ್ರಾಯಪಟ್ಟಿರುವ ಸಿಎಂ, ಗೋಹತ್ಯೆಯಲ್ಲಿ ನೇರ ಹಾಗೂ ಪರೋಕ್ಷವಾಗಿ ಭಾಗಿಯಾದವರನ್ನು ಆದಷ್ಟು ಬೇಗ ಬಂಧಿಸುವಂತೆ ಸೂಚಿಸಿದ್ದಾರೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್ ಹೇಳಿದ್ದಾರೆ.
ಆದರೆ, ಸಭೆಯಲ್ಲಿ ಹಾಜರಿದ್ದ ಮುಖ್ಯಮಂತ್ರಿಯಾಗಲಿ, ಅಧಿಕಾರಿಯಾಗಲಿ ಪೊಲೀಸ್ ಇನ್ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಹತ್ಯೆಯ ಬಗ್ಗೆ ಒಂದೂ ಮಾತನ್ನು ಆಡಿಲ್ಲ. ಕುಮಾರ್ ಪೊಲೀಸ್ ಠಾಣೆಯ ಎದುರು ಕಲ್ಲು ತೂರಾಟ ನಡೆಸುತ್ತಿದ್ದ ಗುಂಪನ್ನ್ನು ಚದುರಿಸಲು ಹೋದಾಗ ಉದ್ರಿಕ್ತ ಜನರು ಅವರನ್ನು ಅಟ್ಟಾಡಿಸಿಕೊಂಡು ಗುಂಡಿಕ್ಕಿ ಸಾಯಿಸಿದರು.
ಹತ್ಯೆ ಹಾಗೂ ಹತ್ಯೆ ಯತ್ನ ಪ್ರಕರಣದಲ್ಲಿ ಪೊಲೀಸರು 28 ಆರೋಪಿಗಳನ್ನು ಹೆಸರಿಸಿದ್ದು ಇದರಲ್ಲಿ 8 ಮಂದಿ ಬಜರಂಗ ದಳ, ವಿಎಚ್ಪಿ ಹಾಗೂ ಬಿಜೆಪಿಯ ಯುವ ಘಟಕಕ್ಕೆ ಸೇರಿದವರಾಗಿದ್ದಾರೆ.